Sunday 21 April 2024

ರವಿ ಕವಿ ಮತ್ತು ಯತಿ

ಶೀರ್ಷಿಕೆ ನೋಡಿ ಬೆರಗಾಗಬೇಡಿ, ನಾನಿಲ್ಲಿ ಯಾವುದೇ ರವಿ ಅಥವಾ ಕವಿಯ ಬಗ್ಗೆ ಹೇಳ ಹೊರಟಿಲ್ಲ.

ಆದರೆ ಯತಿಯ ಬಗ್ಗೆ ಒಂದೆರಡು ಮಾತು ಹೇಳಲು ಬಯಸುವೆ.

"ಯತಿ" ಅಂದರೆ ಹಿಮಾಲಯದಲ್ಲಿ ವಾಸಿಸುವ ಯತಿಯಲ್ಲ, ನಮ್ಮ ಮನೆಯಿಂದ ನಾಲ್ಕು ಹೆಜ್ಜೆ ಮುಂದೆ ಇರುವ ಯತೀಶ ಎಂಬ ನನ್ನ ಗೆಳೆಯನ ಬಗ್ಗೆ, ಯತೀಶನನ್ನು ಯತಿಯನ್ನಾಗಿ ಮಾಡಿ ಅವನ ಹೆಸರಿಗೆ ಒಂದು ಗತಿ ಕಾಣಿಸಿದ ಕೀರ್ತಿ ನಮ್ಮದು .

ವಯಸ್ಸಿನಲ್ಲಿ ನನಗಿಂತ 15 ವರ್ಷ ಹಿರಿಯನಾದರೂ ನಾವಿಬ್ಬರು Navy ಯಲ್ಲಿ ಕೆಲಸ ಮಾಡಿದ್ದರಿಂದ ಒಂದು ಗೆಳೆತನ ಬೆಸೆಯಿತು.

ಈಗ ಹೆಚ್ಚು ಕಡಿಮೆ ತನ್ನ ನಿವೃತ್ತಿ ಜೀವನದ ಹಂತದಲ್ಲಿರುವ ಈತ, ಜೀವನವನ್ನು ಅನುಭವಿಸಿ, ಆನಂದಿಸುತ್ತಿರುವ ಉತ್ಸಾಹದ ಚಿಲುಮೆ.


ಈತನಿಗೆ ಮಾಲು, ಕ್ಲಬ್ಬು/ ಪಬ್ಬುಗಳು ಒಗ್ಗುವುದಿಲ್ಲ, ಆದರೆ ಪ್ರಕೃತಿ ಮಾತೆಯ ಸೊಬಗನ್ನು ಆಸ್ವಾದಿಸುತ್ತಾ ಆನಂದವನ್ನು ಅನುಭವಿಸುತ್ತಾನೆ. ನನ್ನ ಗಮನ ಸೆಳೆಯುವುದು ಈತ  ಆಯ್ದುಕೊಳ್ಳುವ ಜಾಗ ಮತ್ತು ಆತನ ಕ್ಯಾಮೆರಾ ಸೆರೆ ಹಿಡಿಯುವ ವಿಸ್ಮಯ ನೋಟಗಳು, Facebook ನಲ್ಲಿ ಈತನ ಪೋಸ್ಟ್ಗಳನ್ನು ತಪ್ಪದೇ ವೀಕ್ಷಿಸುವಂತೆ ಮಾಡುತ್ತದೆ.


ಸೂರ್ಯೋದಯ ಸೂರ್ಯಾಸ್ತ ಇವೆಲ್ಲ ಮಾಮೂಲಿ ಚಿತ್ರಗಳು ನನ್ನ ಗಮನವನ್ನು ಸೆಳೆಯುವುದು ಈತ ವನ್ಯಜೀವಿಗಳನ್ನು ಸೆರೆ ಹಿಡಿಯುವ ಬಗೆ.

ಹೆಸರೇ ತಿಳಿಯದ ಬಣ್ಣ- ಬಣ್ಣದ ಹಕ್ಕಿಗಳು, ಹುಲಿ, ಸಿಂಹ ಚಿರತೆ, ಕರಡಿ ಇತ್ಯಾದಿ ಪ್ರಾಣಿ- ಪಕ್ಷಿಗಳನ್ನು ಈತ ಸೆರೆ ಹಿಡಿಯುವ ರೀತಿಗೆ ನಿಜಕ್ಕೂ ನಿಬ್ಬರಗಾಗಿದ್ದೇನೆ.


ಈತನಾದರೂ ಕೆನ್ಯ, ಅಮೆಜಾನ್ ಕಾಡು, ಅಥವಾ ಇನ್ನಾವುದೇ ವಿದೇಶ ಪ್ರದೇಶಗಳಿಗೆ ಹೋಗುವುದಿಲ್ಲ, ಬದಲಿಗೆ ನಮ್ಮದೇ ಸುವರ್ಣ ಕರ್ನಾಟಕದಲ್ಲಿರುವ ಬಂಡೀಪುರ, ನಾಗರಹೊಳೆ, ಕಬಿನಿ, ಬಿಸ್ಲೆ, ಮಾಸಿನಗುಡಿ, ದಾಂಡೇಲಿ, ಕೆಲವೊಮ್ಮೆ ಬೆಂಗಳೂರಿನ ಸುತ್ತ ಮತ್ತು ಪ್ರದೇಶಗಳಿಗೆ ಹೋಗಿ ಬರುತ್ತಾನೆ.

"ಈ ಜಾಗಗಳಿಗೆ ಹೋದರೆ ಸಾಕು ಎಲ್ಲಾ ರೀತಿಯ ಪ್ರಾಣಿ-ಪಕ್ಷಿಗಳು ನಮ್ಮ ಮುಂದೆ ಬಂದು ಕ್ಯಾಮರಾಕ್ಕೆ ಪೋಸು ಕೊಡುತ್ತವೆ" ಎಂದು ನಂಬುವಂತೆ ಮಾಡಿದ್ದು ಈತನ ಛಾಯಾಚಿತ್ರಗಳು.

ಅದೇ ನಂಬಿಕೆಯಿಂದ ಬಂಡೀಪುರಕ್ಕೆ ಹೋದ ನನಗೆ ನಿರಾಶೆ ಕಾದಿತ್ತು. ಬೊಗಳುವ ಜಿಂಕೆ,  ಜೇನು ಹುಳುಗಳನ್ನು ತಿನ್ನುವ "ಬೀ ಈಟರ್" ಹಾಗೂ ಒಂದೆರಡು ಬಗೆಯ ಪಕ್ಷಿಗಳು ಕಂಡರೂ, ಯತಿ ಸೆರೆ ಹಿಡಿದಂತೆ ಯಾವ ನೋಟವು ಕಾಣಲಿಲ್ಲ.

ಎಲ್ಲೋ ದೂರದಲ್ಲಿ ಸಾಗಿ ಹೋಗುತ್ತಿರುವ ಆನೆಯ ಹಿಂಡು, ಕಾಡೆಮ್ಮೆಗಳು,  ಎತ್ತರದ ಮರದ ಮೇಲೆ ಕೆಲವೇ ಜನರ ಕಣ್ಣಿಗೆ ಬಿದ್ದ ಹಕ್ಕಿಗಳು "ಹ್ಹಾ ಕಾಣ್ತು...ಕಾಣ್ತು" ಎಂದು ಅವರು ಕೂಗಿ ಆನಂದ ಪಟ್ಟ  ಪ್ರಸಂಗಗಳು ಅದೆಷ್ಟೋ. 

ಯತಿಯ ಕ್ಯಾಮೆರಾ ಮುಂದೆ ಮಲಗಿ ಮೈ ಮುರಿಯುವ, ನೀರು ಕುಡಿಯುವ, ಆಕಳಿಸುವ ಹುಲಿ ಚಿರತೆ ಸಿಂಹ ಇತ್ಯಾದಿ ಪ್ರಾಣಿಗಳು, ನಾವು ಹೋದಾಗ ಮಾತ್ರ ರಜೆಯಲ್ಲಿದ್ದಂತೆ ಭಾಸವಾಯಿತು.


ಸಫಾರಿಯವನು ಒಂದು ಬಳಿ ಗಾಡಿ ನಿಲ್ಲಿಸಿ "ಶ್ಶ್....ಶ್ಶ್..."ಎಂದು ಸನ್ನೆ ಮಾಡಿದ. ಹುಲಿ ಚಿರತೆಯ ನಿರೀಕ್ಷೆಯಲ್ಲಿದ್ದ ನಮ್ಮೆಲ್ಲರಿಗೂ ಒಮ್ಮೆಲೇ ಉತ್ಸಾಹ ಉಕ್ಕಿ ಬಂದಿತು. ನಾವು ಕೂಡ ಒಬ್ಬರಿಗೊಬ್ಬರು "ಶ್ಶ್....ಶ್ಶ್..." ಎಂದುಕೊಳ್ಳುತ್ತಾ ಆತ ಬೆರಳು ತೋರಿದ ಕಡೆ ನೋಡಿದೆವು.

ಹುಲ್ಲಿನ ಮೇಲೆ ಮಾಡಿದ ಹೇಸಿಗೆಯನ್ನು ತೋರಿಸುತ್ತಾ " ಹುಲೀದು ಸಾರ್, ಇಲ್ಲೇ ಎಲ್ಲೋ ಹತ್ತಿರದಲ್ಲೇ ಇದೆ ಗಲಾಟೆ ಮಾಡಬೇಡಿ" ಎಂದ. ಹೆಚ್ಚು ಕಡಿಮೆ ನಮ್ಮ ಬೀದಿ ನಾಯಿಗಳು ಮಾಡುವ ಹೇಸಿಗೆಯಂತಿದ್ದ ಅದನ್ನೇ ಕೆಲವು "ಯಾಷಿಕಾ,  ನೈ ಕಾನ್ ಡಿ-90" ಕ್ಯಾಮೆರಾಗಳು ಸೆರೆ ಹಿಡಿದುಕೊಂಡವು.

ನನ್ನ ಬಳಿ ನೋಕಿಯಾ 3310 ಬಿಟ್ಟು ಬೇರೆ ಏನೂ ಇಲ್ಲದ ಕಾರಣ ನಾನು ಸುಮ್ಮನೆ ಬೆಪ್ಪನಂತೆ ಅತ್ತ- ಇತ್ತ ಕಣ್ಣು ಆಡಿಸುತ್ತಾ ಹುಲಿ ಚಿರತೆಗಳ ನಿರೀಕ್ಷೆಯಲ್ಲಿ ನಿಂತೆ. 


"ಯಾಶಿಕ, D-90 ಗಳಿದ್ದರೂ ಒಂದೂ ಪ್ರಾಣಿ ಕಾಣಲಿಲ್ಲ ನಾವು ಹೋದಾಗ" ಎಂದು ನನ್ನ ಅಳಲು ಅವನ ಮುಂದೆ ತೋಡಿಕೊಂಡಾಗ, " ಎಲ್ಲಾವುದಕ್ಕೂ ತಾಳ್ಮೆ ಬೇಕು ವಿಕ್ಕಿ, ನನಗೂ ಕೆಲವೊಮ್ಮೆ ಕಾಡೆಮ್ಮೆ ಬಿಟ್ಟು ಬೇರೆ ಯಾವ ಪ್ರಾಣಿಯೂ ಕಾಣಿಸುವುದಿಲ್ಲ ಎಲ್ಲಾವುದಕ್ಕೂ ಅದೃಷ್ಟ ಮತ್ತು ಸಮಯ ಕೂಡಿ ಬರಬೇಕು" ಎಂದ.

ಕೋವಿಡ್ ಮಹಾಮಾರಿ ಬಂದ ಕಾಲದಲ್ಲಿ ಮನೆ ಬಿಟ್ಟು ಮನೆ ಆಚೆ ಹೋಗದೆ ಮನೆಯಲ್ಲಿ ಬಂಧಿತರಾಗುವ ಕಾಲ ಬಂದಾಗ ಈತನ ಫೋಟೋಗಳು ಒಂದೆರಡು ತಿಂಗಳುಗಳು ನಿಂತು ಹೋದವು

"ಕೋವಡ್ ಮುಗಿಯುವವರೆಗೂ ಈತನ ಫೇಸ್ ಬುಕ್ Update ಆಗುವುದಿಲ್ಲ" ಎಂದು ತಿಳಿದಿದ್ದ ನನಗೆ ಆಶ್ಚರ್ಯ ಕಾದಿತ್ತು, ಕಾಡಿನ ಪ್ರದೇಶಗಳಲ್ಲಿ ಮಾತ್ರ ಕಾಣಿಸುವ ಹೆಸರು ತಿಳಿಯದ ಹಕ್ಕಿಯೊಂದು ಈತನ ಮನೆಯ ಮಹಡಿ ಮೇಲೆ ಕೂತಿದ್ದನ್ನು ಸೆರೆ ಹಿಡಿದು " ಕರೆಯದೆ ಬಂದ ಅತಿಥಿ" ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹಂಚಿಕೊಂಡ

(ಆಗ ಬೆಂಗಳೂರಿನಲ್ಲಿ ಜಯನಗರ ಹಾಗೂ ಸುತ್ತಮುತ್ತ ಬಡಾವಣೆಗಳಲ್ಲಿ ನವಿಲುಗಳು ಕಂಡು ಬಂದಿದ್ದವು)


" ಅರೆರೆ ನಮ್ಮ ಮನೆಯ ಮಹಡಿಯ ಮೇಲೆ ಸಿಗುತ್ತದೆ ಬಂಡಿಪುರದ ವೈಭವ" ಎಂಬ ಉತ್ಸಾಹ ದೊಂದಿಗೆ ಮಹಡಿ ಮೇಲೆ ಹೋದವನಿಗೆ ಕಂಡದ್ದು

ಮೂರು ಕಾಗೆ, 

5 ಪಾರಿವಾಳ, ಹಾಗೂ 

ಒಂದು ಹದ್ದು.

" ಎಲ್ಲಾವುದಕ್ಕೂ ಅದೃಷ್ಟ ಹಾಗೂ ಸಮಯ ಕೂಡಿ ಬರಬೇಕು ವಿಕ್ಕಿ" ಎಂಬ ಯತಿಯ ಮಾತುಗಳು ನೆನಪಾದವು


ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಕುವೆಂಪು ಅವರು ಒಂದು ಪದ್ಯದಲ್ಲಿ ಮಲೆನಾಡಿನ ಸೌಂದರ್ಯವನ್ನು ವರ್ಣಿಸುವಾಗ, ರವಿಯ ಕಿರಣಗಳು ಭೂಮಿಗೆ ತಾಗದಂತೆ ಬೆಳೆದ ಕಾಡಿನ ಮರದ ಅಡಿಯಲ್ಲಿ ಕಂಡ ಸೌಂದರ್ಯವನ್ನು ವರ್ಣಿಸುತ್ತಾ " ರವಿ ಕಾಣದ್ದನ್ನು ಕವಿ ಕಂಡ" ಎಂದು ಒಂದೇ ಸಾಲಿನಲ್ಲಿ ವರ್ಣಿಸಿದ್ದು ನೆನಪಾಯಿತು.


ಇಲ್ಲಿ ರವಿ, ಕವಿ ಇಬ್ಬರೂ ಕಾಣದನ್ನು ನಮ್ಮ "ಯತಿ" ಕಂಡ


ಅವನ ಕೆಲವು ಛಾಯಾ ಚಿತ್ರಗಳು ನಿಮ್ಮ ವೀಕ್ಷಣೆಗಾಗಿ ಹಂಚಿಕೊಂಡಿದ್ದೇನೆ


  

 

  



 
 


 

  

 





Monday 24 January 2022

ಪ್ಲೌಡ್ ವ್ಯವಸ್ಥೆ (ಅವಸ್ಥೆ!!!!!)

                                      

 ನನ್ನ ಪರಿಚಯಸ್ಥರೊಬ್ಬರು ತಮ್ಮ ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ ಪ್ರವೃತ್ತಿ ಹೊಂದಿರುವವರಾಗಿದ್ದಾರೆ. 

ಹೆಚ್ಚಾಗಿ ಬಳ್ಳಾರಿ ಜಿಲ್ಲೆಯ ಅಗಸನೂರು ಎಂಬ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಇವರ ಕೊಡುಗೆ ಅಪಾರ.

ತಮ್ಮ ಎಂದಿನ ಸೇವೆಯಂತೆ,  ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಕ್ಕಳನ್ನು ಅವರ ಅವಶ್ಯಕತೆಯ ಬಗ್ಗೆ, ಅದಕ್ಕಾಗಿಯೇ ಮೀಸಲಿಟ್ಟ ವಾಟ್ಸಪ್  ಗುಂಪಿನಲ್ಲಿ ವಿಚಾರಿಸಿದರು.

ಎಲ್ಲಾ ಮಕ್ಕಳು ತಮ್ಮ ತಮ್ಮ ಅವಶ್ಯಕತೆಗಳ ಬಗ್ಗೆ ಒಂದು ಪಟ್ಟಿ ತಯಾರು ಮಾಡಿ ಕೊಟ್ಟಿದ್ದರು.

ಪಟ್ಟಿಯಲ್ಲಿ ಬಹುತೇಕ ಮಾಮೂಲು ವಸ್ತುಗಳಿಂದ ತುಂಬಿದ್ದವು. ಪೆನ್ಸಿಲ್ಲು, ರಬ್ಬರ್, ಜಿಯೋ ಮೆಟ್ರಿ ಬಾಕ್ಸ್, ಪೆನ್ನುಗಳು ಇತ್ಯಾದಿ.

ಹೀಗೆ ಪಟ್ಟಿಯನ್ನು ಪರಿಶೀಲಿಸುವಾಗ ಒಬ್ಬ ವಿದ್ಯಾರ್ಥಿನಿ ಬರೆದಿದ್ದ ವಸ್ತುವಿನ ಮೇಲೆ ಅವರ ದೃಷ್ಟಿ ನೆಟ್ಟಿತು. 

"ಪ್ಲೌಡ್" ಎಂದು ಬರೆದಿದ್ದಳು.

ಪಟ್ಟಿಯಲ್ಲಿದ್ದ ಮಿಕ್ಕೆಲ್ಲಾ  ವಿವರಗಳು ಎಂದಿನಂತೆ ಪೆನ್ಸಿಲ್ಲು,ಪೇಪರ್, ರಬ್ಬರ್ ಇತ್ಯಾದಿಗಳಿಂದ ತುಂಬಿದ್ದವು.

ಈ ಪ್ಲೌಡ್  ಬಗ್ಗೆ ಮಾತ್ರ ಅವರಿಗೆ ತಿಳಿಯಲಿಲ್ಲ.

" ಅದೇನು ಸ್ವಲ್ಪ ನೋಡ್ರಿ" ಎಂದು ನನಗೆ ಒಪ್ಪಿಸಿದರು.

ಅದರ ಬಗ್ಗೆ ನನಗೂ ಏನೂ ಗೊತ್ತಿಲ್ಲದ ಕಾರಣ, ಎಲ್ಲವನ್ನು ಅರಿತಿರುವ ನನ್ನ ಮಾವನನ್ನು (Google ಮಾಮಾ) ಕೇಳಿದೆ.


ಗೂಗಲ್ ಮಾಮಾ ಕೊಟ್ಟ ಉತ್ತರವನ್ನು ನೋಡಿ ದಂಗಾಗಿ ಹೋದೆ!!!!!!! Public Libraries in Cloud!!!!

ಕ್ಲೌಡ್ ತಂತ್ರಜ್ಞಾನದ ಬಗ್ಗೆ ನನ್ನ ಅರಿವು "ಗೂಗಲ್ ಡ್ರೈವ್" ಅಥವಾ "ಒನ್ ಡ್ರೈವ್" ಗೆ ಅಷ್ಟೇ ಸೀಮಿತ

 ಇದ್ಯಾವುದೋ ಪ್ಲೌಡ್ ಎಂಬ ಹೊಸ ತತ್ವದ ಬಗ್ಗೆ ನಾನು ಕೇಳಿದ್ದು ಅದೇ ಮೊದಲು.

 ನನ್ನ ಸ್ನೇಹಿತರಿಗೆ ನನ್ನ ಮಹಾನ್ ಸಂಶೋಧನೆ ಬಗ್ಗೆ ಹೇಳಿದೆ, ಅವರು ತಕ್ಷಣ " ಖಂಡಿತಾ ನನಗೆ ಇದರ ಬಗ್ಗೆ ಗೊತ್ತಿಲ್ಲ ವಿಕ್ರಂ, ಇದರ ಬಗ್ಗೆ ಹೇಗೆ ಮುಂದುವರಿಯಬಹುದು  ಸ್ವಲ್ಪ ನೀವೇ ಹೇಳ್ತೀರಾ" ಎಂದು ನಾನೇನೋ ಮಹಾನ್ ಪ್ರವೀಣ ನಂತೆ ನನಗೇ ಒಪ್ಪಿಸಿದರು.


 ನನ್ನ ಗೆಳೆಯರ ಬಳಗದಲ್ಲಿ ನನ್ನ ಬಿಟ್ಟು ಮಿಕ್ಕವರೆಲ್ಲರೂ Software ನಿಪುಣರಾದ್ದರಿಂದ ಒಂದು ಭಂಡಧೈರ್ಯದ ಮೇಲೆ ಒಪ್ಪಿದೆ.

ಪ್ಲೌಡ್ ಬಗ್ಗೆ  ಅವರೆಲ್ಲರಲ್ಲೂ ವಿಚಾರಿಸಿದಾಗ ಬಂದಿದ್ದು ಒಂದೇ ಉತ್ತರ.

" ನಾನು ಇದರ ಬಗ್ಗೆ ಇದೇ ಮೊದಲ ಸಲ ಕೇಳುತ್ತಿರುವುದು"

ನಾನು ಕೂಡ  ಛಲ ಬಿಡದ ತ್ರಿವಿಕ್ರಮನಂತೆ...

" ಅದೇನೋ Public Library on cloud, ಅಂತೆ, ಅಂದರೆ ಕ್ಲೌಡ್ ನಲ್ಲಿ ಲೈಬ್ರೆರಿ ಇರುತ್ತದೆ, ಮಕ್ಕಳು ತಮಗೆ ಬೇಕಾದ ವಿಷಯದ ಬಗ್ಗೆ ತಮಗೆ ಬೇಕಾದ ಭಾಷೆಯಲ್ಲಿ ಪುಸ್ತಕವನ್ನು ಆರಿಸಿಕೊಳ್ಳಬಹುದು" ಎಂದು ನನ್ನದೇ ಒಂದು ಬುರುಡೆ  ತತ್ವವನ್ನು ಬಿಟ್ಟೆ, ಪರಿಣಾಮ ಏನು ಆಗಲಿಲ್ಲ.

" ಗೊತ್ತಿಲ್ಲ ಕಣೋ, ಗೂಗಲ್ ಮಾಡಿ ನೋಡು ಏನಾದ್ರು ಮಾಹಿತಿ ಸಿಗಬಹುದು" ಎಂದು ನನ್ನ ಬಾಣವನ್ನು ನನಗೇ ತಿರುಗಿಸಿದರು.


"ಛೇ… ಬಳ್ಳಾರಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ  ಓದುವ ಹುಡುಗಿಗೆ ಇರುವ ತಿಳುವಳಿಕೆ ಇವರಿಗೆ ಇಲ್ಲವಲ್ಲ" ಎಂದು ಅವರನ್ನು ಶಪಿಸುತ್ತಾ ಗೂಗಲ್ ಮಾಡಲು ಹತ್ತಿದೆ.

ತಕ್ಷಣ " ಯುರೇಕಾ ಆಲೋಚನೆ" ಒಂದು ಹೊಳೆಯಿತು.

" ನಿಜ, ಬೆಂಗಳೂರಿನಲ್ಲಿ 20 ವರ್ಷಗಳಿಂದ ಸಾಫ್ಟ್ವೇರ್ನಲ್ಲಿ ಮುಳುಗಿಹೋಗಿರುವ ತಜ್ಞರಿಗೆ ತಿಳಿಯದ ವಿಷಯ ಆ ಹುಡುಗಿಯ ತಲೆಯನ್ನು ಹೊಕಿದ್ದಾದರೂ ಹೇಗೆ??" ಎಂಬ ಯೋಚನೆ ಮನದ ಮೂಲೆಯಲ್ಲಿ ಸುಳಿಯಿತು.

 ತಕ್ಷಣ ನನ್ನ ಸ್ನೇಹಿತರಿಗೆ ನನ್ನ ಮನದ ಅನುಮಾನವನ್ನು ಹೇಳಿದೆ.

ಅವರು ಕೂಡಲೇ ವಾಟ್ಸಪ್ ಗ್ರೂಪಿನಲ್ಲಿ ಆ ಪ್ರಶ್ನೆಯನ್ನು ಕೇಳಿದರು " ಪ್ಲೌಡ್  ಬಗ್ಗೆ ಆ ಹುಡುಗಿಗೆ  ಹೇಗೆ ತಿಳಿಯಿತು ವಿವರಗಳನ್ನು ತಿಳಿಸಿ" ಎಂದು.

ಆಗ  ಶಿಕ್ಷಕಿಯೊಬ್ಬರು ಕೂಡಲೇ " ಅಯ್ಯೋ ಸಾರ್, ಅದು ಪ್ಲೌಡ್ ಅಲ್ಲ, ಪರೀಕ್ಷೆಯಲ್ಲಿ ಬರೆಯಲು ಉಪಯೋಗಿಸುವ ಪ್ಯಾಡ್, ದಯವಿಟ್ಟು ತರಿಸಿ ಕೊಡಿ. , ಬರೆಯುವಾಗ ಒತ್ತು,ದೀರ್ಘ ಸ್ವಲ್ಪ ಹೆಚ್ಚು ಕಡಿಮೆಯಾಗಿ ಅದು ಪ್ಯಾಡ್ ಬದಲು ಪ್ಲೌಡ್ ಎಂದು ಆಗಿದೆ ದಯವಿಟ್ಟು ಕ್ಷಮಿಸಿ" 


ಒತ್ತು ,ದೀರ್ಘ ಗಳ ಯಡವಟ್ಟಿನಿಂದಾಗಿ ಅನವಶ್ಯಕವಾಗಿ ಎರಡು ದಿನ ನಮ್ಮನ್ನು ಕಾಡಿದ ಆ ಹುಡುಗಿಯ ಮೇಲೆ ಕೋಪ ಬಂದಿತು.

ಆದರೂ ನಮ್ಮ ಯಾರ ಊಹೆಗೂ ನಿಲುಕದ ಒಂದು ಹೊಚ್ಚ-ಹೊಸ ತಂತ್ರಜ್ಞಾನದ ಬಗ್ಗೆ ತನಗೂ ಅರಿವಿಲ್ಲದಂತೆ ನಮ್ಮೆಲ್ಲರಿಗೂ ಹುಡುಗಿ ತಿಳಿಸಿಕೊಟ್ಟಿದ್ದಳು.

 ಈ ಬರವಣಿಗೆ ಮೂಲಕ ಆಕೆಗೆ ಸಾವಿರ ವಂದನೆಗಳು ತಿಳಿಸಬಯಸುತ್ತೇನೆ.


ಹಾಗೆಯೇ ನನ್ನೊಂದಿಗೆ ಪ್ಲೌಡ್ ಬಗ್ಗೆ ತಿಳಿದುಕೊಂಡ ನಿಮ್ಮೆಲ್ಲರಿಗೂ ಅಭಿನಂದನೆಗಳು.

Sunday 29 August 2021

ಹೆಸರಿನಲ್ಲೇನಿದೆ???

                                                                                  

ಹೀಗೊಂದು ಯೋಚನೆ, ಸುಮಾರು ಶತಮಾನಗಳ ಹಿಂದೆ ಬುದ್ಧನ ಶಿಷ್ಯನೊಬ್ಬನ ತಲೆಯೊಳಗೆ ಹೊಕ್ಕಿತ್ತು. ಅದರ ಸತ್ಯಾನ್ವೇಷಣೆಗೆ ಹೊರಟ ಅವನ ದಾರಿಗೂ ನನ್ನ ಹಾದಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಈಗಲೇ ದೃಢೀಕರಿಸಲು ಬಯಸುತ್ತೇನೆ.

ಎಪ್ಪತ್ತರ ದಶಕದ ಕಾಲಮಾನದಲ್ಲಿ "ಸುಧಾ" ಎಂಬ ಜನಪ್ರಿಯ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ "ಸೀಕ್ರೆಟ್ ಏಜೆಂಟ್ ವಿಕ್ರಂ" ಎಂಬ ಫೋಟೋ ಕಾಮಿಕ್ಸ್ ನಲ್ಲಿ ಬರುತ್ತಿದ್ದ ವಿಕ್ರಂ ಎಂಬ ಕಾಲ್ಪನಿಕ ನಾಯಕನಿಗೆ ಅಭಿಮಾನಿಗಳಾಗಿದ್ದ ನನ್ನ ಚಿಕ್ಕಮ್ಮಂದಿರು " ಅಕ್ಕನಿಗೆ ಗಂಡು ಮಗುವಾದರೆ ಅದಕ್ಕೆ ವಿಕ್ರಮ್  ಅಂತ ಹೆಸರಿಡಬೇಕು" ಎಂದು ನನ್ನ ನಾಮಾಂಕಿತವನ್ನು ನಾನು ಗರ್ಭದಲ್ಲಿದ್ದಾಗಲೇ ನಿರ್ಧರಿಸಿದ್ದರು.

ಸೀಕ್ರೆಟ್ ಏಜೆಂಟ್ ಅಥವಾ ಇನ್ಯಾವುದೇ ರೀತಿಯ ನಾಯಕನಾಗದಿದ್ದರೂ  "ವಿಕ್ರಮ" ನಾಗಿ ಹುಟ್ಟಿ ಬೆಳೆದೆ. 

ಮುಂದೆ ಶಾಲೆಗೆ ಸೇರುವಾಗ ತಂದೆಯ ಹೆಸರಿನ( ಶಾಮಣ್ಣ) ಮೊದಲ ಅಕ್ಷರ ನಮ್ಮ ಹೆಸರಿನ ಮುಂದೆ ಜೋಡಿಸಲು " ಎಸ್. ವಿಕ್ರಂ" ಆದೆ.

ಹತ್ತನೇ ತರಗತಿಗೆ ಬಂದಾಗ "Marks sheet ನಲ್ಲಿ ನಿಮ್ಮ ಹೆಸರು, ಜನ್ಮದಿನಾಂಕ ಮುದ್ರಿತ ವಾಗುತ್ತದೆ ದಯವಿಟ್ಟು ಸರಿಯಿದೆಯೇ ಎಂದು ನೋಡಿಕೊಳ್ಳಿ, ಇಲ್ಲವಾದಲ್ಲಿ ಈಗಲೇ ಸರಿ ಮಾಡಿಸಿಕೊಳ್ಳಿ, ಇಲ್ಲದಿದ್ದರೆ ಮುಂದೆ ಬಹಳ ಪ್ರಯಾಸವಾಗುತ್ತದೆ" ಎಂದು ಶಾಲೆಯವರು ನಮ್ಮ ಹೆಸರು ಮತ್ತು ಜನ್ಮ ದಿನಾಂಕ ಇರುವ ಪಟ್ಟಿಯನ್ನು ಕೊಟ್ಟಿದ್ದರು.

" ವಿ- ಐ- ಕೆ- ಆರ್- ಏ- ಎಂ. ಎಸ್ " ಹಾಗೂ ನನ್ನ ಜನ್ಮದಿನಾಂಕ ಇದಿಷ್ಟು ವಿವರಗಳನ್ನು ದೃಢಪಡಿಸಲು ನನಗೆ ದೊರಕಿದ್ದ ಕಾಲಮಾನ ಬರೋಬ್ಬರಿ ಮೂರು ದಿನಗಳು.

SSLC ಅಂಕಪಟ್ಟಿಯಲ್ಲಿ ನಮ್ಮ ಹೆಸರಿನ ನಂತರ initials ಬರುವುದರಿಂದ "ಎಸ್. ವಿಕ್ರಂ" ನಿಂದ  "ವಿಕ್ರಂ. ಎಸ್" ಗೆ ಬಡ್ತಿ ದೊರೆಯಿತು.

ಹೀಗೆ ಮುಂದುವರೆದು ಇಂಜಿನಿಯರಿಂಗ್ ಗೆ ಸೇರಿದೆ ಮತ್ತು ಮುಂದಿನ ಹೆಜ್ಜೆಯಾಗಿ ಪಾಸ್ಪೋರ್ಟ್ ಗೆ ಅರ್ಜಿ ಹಾಕಿದೆ.

ಅರ್ಜಿಯಲ್ಲಿ Expand Initials ಎಂದು ನಮೂದಿಸಿದ್ದ ಕಾರಣ ನನ್ನ ಹೆಸರು "ವಿಕ್ರಮ್ ಶಾಮಣ್ಣ" ಎಂದು ಮಾರ್ಪಾಡಾಯಿತು.ಅಂದಿನಿಂದ ಶಾಮಣ್ಣ ನನ್ನ ಸರ್ನೇಮ್ ಆಯ್ತು. 


ನಿಜವಾದ ಫಜೀತಿ ಶುರುವಾದದ್ದು ಅಂದಿನಿಂದಲೇ.


ನಾನು Shipping ನಲ್ಲಿ ಕೆಲಸ ಮಾಡುತ್ತಿದ್ದರಿಂದ ಮತ್ತು ಅಲ್ಲಿ ಪದೇ ಪದೇ Medical checkup, training, promotional interview.. ಹೀಗೆ ನಾನಾ ರೀತಿಯ Procedure ಗಳು ಇದ್ದು ಮತ್ತು ಇದರಲ್ಲಿ ಒಬ್ಬೊಬ್ಬರನ್ನೇ ಕರೆದು ತಪಾಸಣೆ ಮಾಡುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ.

ಹೀಗೊಂದು ತಪಾಸಣೆಯ ಸಂದರ್ಭದಲ್ಲಿ ನನ್ನ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ, ಜವಾನ ಬಂದು

" ಶಮಂತ್…. ಶಾಮಂತ್…" ಎಂದು ಕೂಗಿದಾಗ ಯಾರ ಪ್ರತಿಕ್ರಿಯೆ ಬಾರದೇ ಕೊನೆಗೆ ಆತ " ವಿಕ್ರಂ" ಎಂದು ಕೂಗಿದಾಗ ಶಿಸ್ತಿನ ಸಿಪಾಯಿಯಂತೆ ಸೆಟೆದು ನಿಂತ ನನ್ನನ್ನು ನೋಡಿ

 " ಕಬ್ ಸೆ ಬುಲಾ ರಹಾ ಹೂ.. ಜವಾಬ್ ಕ್ಯೂ ನಹಿ ದೇತೆ ಹೋ" ಎಂದಾಗಲೇ ನನಗೆ ತಿಳಿದಿದ್ದು ಅಲ್ಲಿಯವರೆಗೂ ಆತ ಕೂಗುತ್ತಿದ್ದ  ಶಮಂತ್, ಶಾಮಂತ್.. ಎಲ್ಲವೂ ನಾನೇ ಎಂದು.

ಎಷ್ಟೋ ಜನ ಅದನ್ನು ಸಾಮಂತ್, ಸಾವಂತ್.. ಎಂದು ಅರ್ಥ ಮಾಡಿಕೊಂಡು ನಾನು ಮರಾಠಿಯ ಕುಡಿ ಎಂದು ತಿಳಿದು ಎಷ್ಟೋ ಸಲ ಮರಾಠಿಯಲ್ಲಿ ಮಾತನಾಡಿಸಿದ್ದು ಉಂಟು.

ಅಂದಿನಿಂದ ಇಂತಹ ಸ್ಥಳಗಳಲ್ಲಿ ನನಗೆ ಒಂದೇ ಚಿಂತೆ 


" ನನ್ನ ಹೆಸರನ್ನು ಏನೆಂದು ಕರೆಯುವರೋ…??!!"


ಮುಂದೊಂದು ದಿನ ನನ್ನ ಬಡ್ತಿಯ ಪರೀಕ್ಷೆಯ Interview ಸಲುವಾಗಿ ನನ್ನ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ

" ಶರ್ಮಾ" ಎಂದು ಜವಾನ ಜೋರಾಗಿ ಕೂಗಿದ. ಯಾರು ಪ್ರತಿಕ್ರಿಯಸದ ಕಾರಣ ಬೇರೆ ಬೇರೆ ಜನರ ಹೆಸರುಗಳನ್ನು ಕೂಗಿದ. ನನ್ನ ಸರದಿ ಬರಲೇ ಇಲ್ಲ. ಕೇಳಿದಾಗ,

" ಶರ್ಮಜೀ,   ಸಬ್ಸೆ ಪೆಹಲೆ ಆಪ್ಕಾ ಹೀ ನಾಮ್ ಬುಲಾಯ…ಕಿಧರ್ ಥೇ ಆಪ್??" ಎಂದು ನನ್ನ ಹೆಸರನ್ನು ತಪ್ಪಾಗಿ ಕೂಗುವುದಲ್ಲದೆ ನನ್ನದೇ ತಪ್ಪು ಎನ್ನುವಂತೆ ಪ್ರಶ್ನೆಯನ್ನು ಹಾಕಿದ್ದ. 

" ಆಂಗೀರಸ… ವಿಕ್ರಮ ಶರ್ಮಃ ಅಹಂಭೋ ಅಭಿವಾದಯೇ" ಎಂಬ ಸಿದ್ಧಾಂತದಂತೆ ಆತ ಸಾಂಸ್ಕೃತಿಕವಾಗಿ ನನ್ನ ಹೆಸರನ್ನು ಕೂಗಿದ್ದ.

 "ಬಹುಶಃ ತಪ್ಪು ನನ್ನದೇ ಇರಬಹುದು" ಎಂದು ನನ್ನನ್ನು ನಾನೇ ಸಮರ್ಥಿಸಿಕೊಂಡೆ.


ಮುಂದೆ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಶಾಮ್,  ಎಂದು ಕರೆದರೆ ಮತ್ತೆ ಕೆಲವರು ಶಮಾನ, ಶಮಾಣ, ಶರ್ಮ, ಶಮಂತ್, ಸಾಮಂತ್ ಹೀಗೆ ಅವರ ನಾಲಿಗೆ ಹೊರಳಿದಂತೆ ಕರೆದರು. 

ನನಗೆ ಯಾರ ಹೆಸರು ಕರೆದರೂ ನನ್ನ ಹೆಸರೇ ಕರೆಯುತ್ತಿರುವರೇನೋ ಎಂದು ಭಾಸವಾಗುತ್ತಿತ್ತು.  ಕೆಲವರಿಗೆ ಇದು ತಮಾಷೆಯಾಗಿಯೂ ಕಾಣುತ್ತಿತ್ತು.


ಒಮ್ಮೆ ನನ್ನ ಆದಾಯ ತೆರಿಗೆಯಲ್ಲಿ ಕೆಲವು ತಪ್ಪುಗಳಿದ್ದ ಕಾರಣ ಅದನ್ನು ಸರಿಪಡಿಸಲು Accounts Department ಗೆ ಹೋಗಿದ್ದೆ.  ನಾ ಬಂದ ಕಾರಣ ಕೇಳಿದ ಗುಮಾಸ್ತನು ತನ್ನ ಮೀಸೆಯನ್ನು ತೀಡುತ್ತಾ 

" ನಾಮ್ ಬೋಲಿಯೇ " ಎಂದ.

ವಿಕ್ರಂ ಎಂದಷ್ಟೇ ಹೇಳಿದ್ದಕ್ಕೆ ಸಮಾಧಾನಗೊಳ್ಳದೆ,

" ಪೂರ ನಾಮ್ ಬತಾಯಿಯೇ" ಎಂದ.

ವಿಕ್ರಂ ಶಾಮಣ್ಣ ಎಂದು ಹೇಳಿದ ಕೂಡಲೇ

"Spelling ಬತಾಯಿಯೇ" ಎಂದು ಪೆನ್ನನ್ನು ಆಯುಧದಂತೆ ತಯಾರಾಗಿ ಹಿಡಿದನು. 

ಹೆಸರನ್ನು ಬರೆದು, ಶಾಮಣ್ಣ ಎಂಬ ಪದವನ್ನು ಶಾಮ್ ಮತ್ತು ಅಣ್ಣ ಎಂದು ವಿಂಗಡಿಸಿ 

" ಶಾಮ್ ಔರ್ ಅಣ್ಣ?? " ಎಂದು ಕೇಳಿದ. 

ಹದಿನೈದು ವರ್ಷಗಳಲ್ಲಿ ನನ್ನ ಹೆಸರನ್ನು ಸರಿಯಾಗಿ ಹೇಳಿದ್ದಕ್ಕೆ ನನಗೆ ಹೆಚ್ಚು ಕಡಿಮೆ ಕಣ್ಣಲ್ಲಿ ನೀರೇ ಬಂದಿತು. ನನ್ನ ಪ್ರತಿಕ್ರಿಯೆಗೂ ಕಾಯದೆ ಸ್ವತಃ  ತನ್ನಲ್ಲೇ ಎಂಬಂತೆ

" ಶಾಮ್ ಮತ್ಲಬ್ ಕೃಷ್ಣ, ಅಣ್ಣ ಮತ್ಲಬ್ ಬಡೇ ಭಾಯ್…ಮತ್ಲಬ್ ಕೃಷ್ಣ ಕ ಬಡೇ ಭಾಯ್- ಬಲರಾಮ್, ಆಪ್ಕಾ ನಾಮ್ ವಿಕ್ರಂ ಬಲರಾಮ್" ಎಂದು ವಿಜಯದ ನಗೆ ನಗೆ ಬೀರುತ್ತಾ 

" ಠೋಕ್ ಥಾಲಿ"  ಎಂದು ತನ್ನ ಹಸ್ತವನ್ನು ನನ್ನ ಬಳಿ ಚಾಚಿದನು.


15 ವರ್ಷಗಳಿಂದ ನನ್ನ ಹೆಸರನ್ನು ತಪ್ಪಾಗಿ ಕರೆಯುತ್ತಿದ್ದ ಎಷ್ಟೋ ಜನರಿಗಿಂತ ನನ್ನ ಹೆಸರನ್ನೇ ಬದಲಿಸಿದ ಈತ ಸಾವಿರಪಾಲು ಮೇಲು ಎಂದೆನಿಸಿತು. ಆತನಿಗೆ ನಾನು ಹೇಗೆ ಪ್ರತಿಕ್ರಿಯಿಸಲಿ ಎಂದು ತಿಳಿಯದೇ ಪೆಚ್ಚಾಗಿ ನೋಡುತ್ತಾ ಸುಮ್ಮನೆ ಹಲ್ಲುಕಿರಿಯುತ್ತಾ ನಿಂತೆ.

ನನಗೆ ಒಂದು ಅರ್ಥವಾಗದ ಸಂಗತಿಯೆಂದರೆ

 "ಎಲ್ಲರಿಗೂ ಶಾಮ್ ಮತ್ತು ಅಣ್ಣ ಎರಡು ಪದಗಳ ಉಚ್ಚಾರಣೆ ಸ್ಪಷ್ಟವಾಗಿಯೇ ಬರುತ್ತಿತ್ತು, ಆದರೂ ಅವೆರಡೂ ಪದಗಳು ಸೇರಿದಾಗ ಮಾತ್ರ ಶಾಮಣ್ಣನ ಬದಲಿಗೆ ಉಳಿದೆಲ್ಲ ಪದಗಳು ಬರುತ್ತಿದ್ದವು, ಅವರಿಗೆ ಅಷ್ಟೊಂದು ಶ್ರಮ ವಾದರೆ ಸುಮ್ಮನೆ ವಿಕ್ರಂ ಎಂದೇ ಕರೆಯಬಹುದಲ್ಲ" ಎಂದು ನನ್ನ ಹೆಸರನ್ನು ಬದಲಿಸಿದ/ ಮರೆಯುವಂತೆ ಮಾಡಿದ, ಮಹಾನುಭಾವರನ್ನು ನೆನೆಯುತ್ತ/ ಶಪಿಸುತ್ತಾ ಕುಳಿತಿದ್ದಾಗ 

" ಶಾಮಣ್ಣ" ಎಂದು ಕೊರಿಯರಿನವನು ಕರೆದಾಗ ಎಚ್ಚೆತ್ತುಕೊಂಡು ವಾಸ್ತವಕ್ಕೆ ಬಂದೆ.

ನಾ ಬಾಗಿಲ ಬಳಿ ಹೋಗುವಷ್ಟರಲ್ಲಿ ನನ್ನ ತಂದೆಯವರು ಬಂದು ಅದನ್ನು ಸಹಿಮಾಡಿ ಸ್ವೀಕರಿಸಿ 

" ಅವನು ಕೂಗಿದ್ದು ನನ್ನ ಹೆಸರನ್ನು, ನೀ ಯಾಕೆ ಎದ್ದು ಬಂದೆ? ನಿನ್ನ ಹೆಸರೇ ನಿನಗೆ ಮರೆತು ಹೋಯಿತಾ?" ಎಂದು ತಮಾಷೆ ಮಾಡುತ್ತಾ ಒಳನಡೆದರು.


ನಿಜಕ್ಕೂ ನನ್ನ ಹೆಸರನ್ನು ನಾನು ಮರೆತಿರುವನೇ ? ಇದಕ್ಕೆ ಯಾರು ಹೊಣೆ?

ಇಷ್ಟೆಲ್ಲಾ ಆದರೂ ನನ್ನನ್ನು ಕಟ್ಟಕಡೆಯದಾಗಿ ಕಾಡುವ ಯಕ್ಷಪ್ರಶ್ನೆ 

" ಹೆಸರಿನಲ್ಲೇನಿದೆ???!!!"

( ನನ್ನ ಹೆಸರೊಂದನ್ನು ಬಿಟ್ಟು, ಮಿಕ್ಕಿದ್ದೆಲ್ಲವೂ ಇದೆ)

Tuesday 30 September 2014

ಬಯಲುಸೀಮೆ ಕಟ್ಟೆ ಪುರಾಣ

ಹೀಗೊಂದು ಅಂಕಣ ಪ್ರಸಿದ್ದ ವಾರಪತ್ರಿಕೆಯಾದ "ಲಂಕೇಶ್ ಪತ್ರಿಕೆ"ಯಲ್ಲಿ ಪ್ರಕಟವಾಗುತ್ತಿತು. ಬಿ.ಚಂದ್ರೇಗೌಡ್ರು ಕೊಡುತ್ತಿದ್ದ ಗ್ರಾಮೀಣ ಚಿತ್ರಣವೂ ಮನಸ್ಸಿಗೆ ಬಹಳ ಮುದನೀಡುತ್ತಿತ್ತು. ನನ್ನೂರಿಗೆ ಹೋಗುವಾಗ ದಾರಿಯಲ್ಲಿ ಹೊತ್ತು ಕಳೆಯಲು ಅದಕ್ಕಿಂತ ಸೂಕ್ತವಾದ ಮನೋರಂಜನಾ ಮಾರ್ಗ ಬೇರೆಯೊಂದಿದ್ದಂತೆ ನನಗೆ ಅನಿಸಿಲ್ಲ.
ಹಳ್ಳಿಯ ಜೀವನ ಶೈಲಿ, ಅಲ್ಲಿಯ ಜನರ ಮುಗ್ಧತೆ, ಅವರ ನೋವು/ನಲಿವು, ಅವರ ಹಾಳುಹರಟೆ, ತಮ್ಮಲ್ಲಿ ಅಪಾರವಾದ ಜ್ಞಾನಭಂಡಾರವಿದೆ ಎನ್ನುವ ಅವರ ದೃಢವಾದ ನಂಬಿಕೆ  ಇವೆಲ್ಲವನ್ನೂ ಒಂದು ವಿನೋದ-ವಿಡಂಬನೆ ಮಿಶ್ರಿತ ನಗೆಹನಿಯಾಗಿ ಬರೆಯುತ್ತಿದ್ದ ಚಂದ್ರೇಗೌಡರ ಶೈಲಿಯೂ ಒಂದು ಗ್ರಾಮೀಣ ಲೋಕವನ್ನೇ ಕಣ್ಣ ಮುಂದೆ ತೆರೆದಿಡುತ್ತಿತ್ತು.
ಆ ಅಂಕಣದಲ್ಲಿ ಬರುತ್ತಿದ್ದ ಖಾಯಂ ಕಾಲ್ಪನಿಕ ಪಾತ್ರಧಾರಿಗಳಾದ ಉಗ್ರಿ, ಜುಮ್ಮಿ, ವಾಟಿಸ್ಸೆಯರು ನನ್ನ ಸಹ ಪ್ರಯಾಣಿಕರಾಗಿ ಪ್ರಯಾಣವನ್ನು ಒಂದು ಅನುಭವವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರಭಾವ ಎಷ್ಟರ ಮಟ್ಟಿಗೆ ಇತ್ತೆಂದರೆ ನನ್ನೂರಿನ ಜನರಲ್ಲಿ ಆ ಪಾತ್ರಗಳು ಹುದುಗಿರಬಹುದೇನೋ ಎಂದು ಸಂಶೋಧಿಸುತ್ತಿದ್ದೆ.
ನನ್ನೂರು ಮಲೆಸೀಮೆಗೆ ಸೇರಿದ್ದರೂ ಸಹ ಬಯಲುಸೀಮೆ ಹೆಚ್ಚೇನು ದೂರವಿರಲಿಲ್ಲವಾದ್ದರಿಂದ ಆ ಅಂಕಣವೂ ನನ್ನೂರಿನಿಂದಲೇ ಪ್ರೇರಿತವಾದುದ್ದೇನೋ ಎಂದು ಎಷ್ಟೋ ಸಲ ಅನಿಸಿದ್ದುಂಟು.
ನನಗೆ ವಯಸ್ಸು ೧೭ ತುಂಬುವವರೆಗೂ ನನ್ನೂರಿನಲ್ಲಿ ನನ್ನ ವಾಸ್ತವ್ಯ ಕೇವಲ ಬೇಸಿಗೆ ರಜೆಗಷ್ಟೇ ಸೀಮಿತವಾಗಿತ್ತು. ಹಾಸನದಲ್ಲಿ ಇಂಜೀನಿಯರಿಂಗ್ ಸೇರಿದಾಗ ಅಲ್ಲಿಂದ ಕೇವಲ ೮ ಕಿ.ಮೀ ದೂರದಲ್ಲಿದ್ದ ನನ್ನ ಊರಿನಲ್ಲೇ ಅಜ್ಜನ ಮನೆಯಲ್ಲಿ ಇದ್ದು ಓದುವ ಅವಕಾಶ ದೊರೆಯಿತು.
ಕಾಲೇಜು ಮುಗಿಸಿ ಮನೆಗೆ ಬಂದ ಮೇಲೆ ಸಂಜೆ ಹೊತ್ತು ಕಳೆಯಲು ದಾರಿಯನ್ನು ಹುಡುಕುತ್ತಿದವನಿಗೆ ಕಂಡಿದ್ದು ಅಜ್ಜನ ಮನೆಯ ಎದುರು ಇದ್ದ ಅರಳೀ ಮರದ ಕಟ್ಟೆ.
ಅಲ್ಲಿ ಕೂತಿದ್ದ ನಾಕಾರು ಜನರು. ಚಿಕ್ಕಂದಿನಿಂದ ಊರಿಗೆ ಬಂದು ಹೋಗಿ ಮಾಡುತ್ತಿದ್ದರಿಂದ ಎಲ್ಲರೂ ಪರಿಚಿತರೆ. ಅವರೊಂದಿಗೆ ಮಾತಿಗೆ ಕೂತೆ, ಇನ್ನೂ ಇಂಜಿನಿಯರಿಂಗ್ ಸೇರಿದ ಹೊಸತು, ಸಹಜವಾಗಿಯೆ ಅವರುಗಳಿಗೆ ಅದರ ಬಗ್ಗೆ ಕುತೂಹಲ, ಎಲ್ಲಕ್ಕಿಂತ ಮಿಗಿಲಾಗಿ "ಚಿಕ್ಕಂದಿನಿಂದ ಬೆಂಗಳೂರಿನಲ್ಲೆ ವಿಧ್ಯಾಭ್ಯಾಸ ಮಾಡಿದವನು ಈಗ ಇಂಜಿನಿಯರಿಂಗ್ ಮಾಡಲು ಹಾಸನಕ್ಕೆ ಯಾಕೆ ಬಂದ?" ಎನ್ನುವ ಅವರ ಅನುಮಾನ ಬಗೆಹರಿಸಿಕೊಳ್ಳುವ ಹವಣಿಕೆಯೇ ಹೆಚ್ಚಾಗಿತ್ತು. ಸಾಧ್ಯವಾದಷ್ಟು ಅವರಿಗೆ ಅಂದಿನ ದಿನಗಳಲ್ಲಿ ಇದ್ದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮೈಸೂರು ವಿಶ್ವವಿದ್ಯಾಲಯವೂ ಬಹಳ ಸುಪ್ರಸಿದ್ಧವೆಂದೂ ಹಾಗೂ ಹಾಸನದ ಪ್ರಾಂತ್ಯವೂ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿರುವುದಾಗಿಯೂ ವಿವರಿಸಲು ಹತ್ತಿದೆ. ಹಾಗೆ ಹಾದು ಹೋಗುತ್ತಿದ್ದ "ಗೊಲ್ಲ್ರಟ್ಟಿ ಸಿದ್ಧ" ನಾವೇನೋ ಘನಂಧಾರಿ ವಿಷಯ ಮಾತನಾಡುತ್ತಿದ್ದೇವೆ ಎಂದು ತಿಳಿದು ಹೆಗಲಮೇಲಿನಿಂದ ಟವಲನ್ನು ಕೊಡುವುತ್ತಾ ಬಂದು ಕೂತವನೇ ಕುತೂಹಲದಿಂದ ಕೇಳತೊಡಗಿದ. ಸಿದ್ಧ ಇದ್ದದನ್ನು ನೋಡಿ "ಗೌಡ್ರಟ್ಟಿ ಮಂಜ"ನೂ ಬಂದು ಕುಳಿತ, ಹೀಗೆ ಇವರನ್ನು ನೋಡಿ ಅವರು ಅವರನ್ನು ನೋಡಿ ಇವರು ಬಂದು ಕೂರುತ್ತಾ ಅಲ್ಲಿ ಒಂದು ಜನ ಸಮೂಹವೇ ಸೇರಿತು. ಇಷ್ಟರಲ್ಲಿ ನನ್ನ ಮಾತು ಯಾವಾಗಲೋ ಮುಗಿದಿತ್ತು.
ನನ್ನ ಮಾತು ಮುಗಿಯಲೇ ಕಾಯುತ್ತಿದ್ದವನಂತೆ ಮಂಜನೂ "ಏನ್ಲ ಸಿದ್ಧ? ಯಂಗವೋ ಪೈರು?" ಎಂದು ಸಿದ್ಧನ ಭತ್ತದ ಪೈರಿನ ಬಗ್ಗೆ ವಿಚಾರಿಸುವ ಸಲುವಾಗಿ ಅವನನ್ನು ಮಾತಿಗೆ ಎಳೆದಿದ್ದ.
"ಥೋsssss.....ಏನ್ ಪೈರೋ ಮಾರಾಯ, ಮಳಿಲ್ದಲೆಯಾ ವಣಕ್ಕೋಂಡ್ ಸಾಯ್ತಿವೆ, ಕೆರೆ ಬತ್ಥೋಗ್ ವರ್ಷಾತು, ಬೋರ್ನಾಗೆ ನೀರ್ ಬರೊಲ್ದು" ಎನ್ನುತ್ತಾ ತನ್ನ ಗೋಳಿನ ಖಾತೆಯನ್ನೇ ತೆರೆದ.
"ಅಮೇರಿಕ್ದಲ್ಲಿ ಮಳೆ ಬರ್ಸ್ಸೋ ಮೆಷೀನು ಸಿಗ್ತವಂತೆ, ಗ್ರಾಮೀಣ ಬ್ಯಾಂಕ್ನಾಗೆ ಸಾಲ ತಕ್ಕೋಂಡ್ ಒಂದು ಮೆಷೀನು ತರಸ್ಕ ಅತ್ಲಾಗಿ" ಎಂದು ಅವನ ಸಮಸ್ಯೆಗೆ ನೇರವಾಗಿ ವಿದೇಶದ ಪರಿಹಾರ ಸೂಚಿಸಿದ ಮಂಜ.
"ವ್ಹಾssss... ಅದೇನ್ ಸೌದೆ ಹೊತ್ಗಂಡ್ ಬಂದಹಂಗೆ ಅನ್ಕ್ಯಂಡ್ಯ?" ಎಂದ ಸಿದ್ದ ಮತ್ತೆ ರಾಗವೆಳೆದ.
ಅಷ್ಟರಲ್ಲಿ ತನ್ನ ಗ್ಯಾರೇಜು ಕೆಲಸ ಮುಗಿಸಿ ಗ್ರೀಸಿನಿಂದ ಮಸಿಯಾಗಿದ್ದ ಕೈಯನ್ನು ಉಜ್ಜಿಕೊಳ್ಳುತ್ತಾ "ಏಣ್ರುಲ್ಲಾ ಅದೂ, ಸೀದಾ ಅಮೇರಿಕಾಯಿಂದವ ಸೌದೆ ತರೋ ಮಾತು?" ಎನ್ನುತಾ ಮಾತಿನ ಧಿಕ್ಕನ್ನೇ ಬದಲಿಸಿ ಬಿಟ್ಟ ಬೆಸ್ತ್ರಟ್ಟಿ ರಾಜ.
"ಥೋsssss ನಿನ್ಮನೆಕಾಯ್ಹಿಹೋಗ ಸೌದೆ ಅಲ್ಲ ಕಣ್ಲ, ಮಳೆ ಬರ್ಸೋ ಮೆಷಿನ್ನು" ಎಂದು ಅವನಿಗೆ ಅರ್ಥ ಮಾಡಿಸಿದ ಬ್ರಾಂಬ್ರಟ್ಟಿ ಸೀನ.
"ವ್ಹಾ.., ಆ ಮೆಷಿನ್ನು ಕೆಟ್ವೋದ್ರೆ ಅದಕ್ಕೆಲ್ಲವ ಪಾರ್ಟ್ಸು ಗೀರ್ಟ್ಸು ಅಮೇರಿಕಾಯಿಂದನೆ ತರಿಸ್ಬೇಬೇಕಾಯ್ತದೆ, ಬ್ಯಾಡ ಕಣ್ಲ ಸಿದ್ದ, ನನ್ ಮಾತ್ಕೇಳು, ಮದ್ರಾಸಿನಲ್ಲಿ ಅದಕ್ಕೇಂತಲೆಯಾ ಕೆಮಿಕಲ್ಲು ಸಿಗ್ತವೆ, ಒಂದು ಲೋಡು ತರಸ್ಕಂಡು ನೋಡು" ಎಂದು ತನ್ನ ಮೆಕ್ಯಾನಿಕ್ ಮೆದುಳನ್ನು ಅವರ ಮುಂದಿಟ್ಟ.
ಅವನ ಮಾತನ್ನು ತಕ್ಕ ಮಟ್ಟಿಗೆ ಒಪ್ಪಿದನಾದರೂ ಕೆಮಿಕಲ್ಲು ಎಂದರೆ ಆಸಿಡ್ ಎಂದೇ ಭಾವಿಸಿದ್ದ ಮಂಜ ತುಸು ಗಾಬರಿಯಾಗೇ ಹೇಳಿದ "ಆದ್ರೂನುವಾ ಆ ಪಾಟಿ ಲೋಡುಗಟ್ಟ್ಲೆ ಆಸಿಡ್ ತರ‍್ಸ್ಕಳೋದು ಅಂದ್ರೆ ಸ್ವಲ್ಪ ಯಡ್ವಟ್ಟೇಯಾ"
"ಉಗೀರ್ಲ ಮಖ್ಖೆ, ಥೊ.... ನಿನ್ನ್ ಮನೆ ಹಡ್ಗತೋಗ ಕೆಮಿಕಲ್ಲು ಅಂದ್ರೆ ಆಸಿಡ್ ಅಂತ ತಿಳ್ಕಂಡ್ಬಿದ್ತು ಪೆದ್ದ್ಬಡ್ಡೆತದು, ಲೇ ಕೆಮಿಕಲ್ಲು ಅಂದ್ರೆ ಆಸಿಡ್ ಅಲ್ಲ ಕಣ್ಲ, ನೋಡಾಕೆ ಸೀಮೆ ಅಕ್ಕಿ ಗುಳ್ಗೆ ಇದ್ದಂಗೆ ಇರ್ತವೆ, ಮಂಕ್ರೀಲಿ ತುಂಬ್ಕ್ಯಂಡ್ ಎರ್ಚ್ಕೊಂಡ್ ಎರ್ಚ್ಕೊಂಡ್ ಒಯ್ತಾಯಿರೋದು ಅಷ್ಟೇಯಾ, ಅದು ನೀರಾಗಿ ಕೆಳಗೆ ಬೀಳ್ತವೆ, ಅಲ್ವೇನ್ರಿ ಅಯ್ನೋರೆ?" ಎಂದು ನಾನೇನೋ ಕೃಷಿ ವಿಜ್ಞಾನದಲ್ಲಿ ಮಹಾ ಪರಿಣಿತನೆಂಬಂತೆ ನನ್ನ ಸಮಜಾಯಿಸಿ ಕೇಳಿದ ರಾಜ.
"ಆಂ" ಎಂಬ ಉದ್ಗಾರವನ್ನಷ್ಟೇ ಹೊರಳಿಸಿದೆ, ಸಂಜೆ ಕತ್ತಲಾದುದರಿಂದ ನನ್ನ ಮುಖ ಭಾವನೆ ಗೋಚರವಾಗದೆ ನನ್ನ ಉದ್ಗಾರವನ್ನಷ್ಟೇ ಕೇಳಿಸಿಕೊಂಡು ಅದನ್ನೇ ನನ್ನ ಸಮಜಾಯಿಸಿ ಎಂದು ತಿಳಿದು "ಅಕಳಪ್ಪ, ಐನೋರು ಹೂ ಅಂದ್ರು, ಇನ್ನೇನ್ಲ ನಿಂದು?" ನನ್ನ ಒಪ್ಪಿಗೆಯೇ ಅಂತಿಮ ಎನ್ನುವಂತೆ ಹೇಳಿದ ರಾಜ.
"ಬ್ಯಾರೆ ಯಾರಾದ್ರು ಜ್ಯೊತೆಗಿದ್ದಿದ್ರೆ ಜಂಟಿ ಖಾತೇಲಿ ತರ್ಸ್ಕ ಬಹುದಿತ್ತು ಅತ್ಲಾಗಿ" ತನ್ನ ಚೆಡ್ಡಿಯನ್ನು ಕೆರೆಯುತ್ತಾ ಕಿವಿಯ ಸಂಧಿಯಿಂದ ಬೀಡಿಯನ್ನು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿದ ಸಿದ್ಧ.
"ಒಂದ್ ಕಡೆಯಿಂದ ನೋಡ್ಕ್ಯೊಂಡ್ ಬಾರ್ಲ ಸಿದ್ದ, ಹರಿಜನ ಕಾಲೋನಿಲಾಗ್ಲಿ, ಬ್ರಾಂಬ್ರಟ್ಟೀಲಾಗ್ಲಿ, ಗೌಡ್ರಟ್ಟಿ, ಗೊಲ್ಲ್ರಟ್ಟಿ, ಬೆಸ್ತ್ರಟ್ಟಿ ಕಡೀಕ್ ಜನತಾ ಮನೆಲಾಗ್ಲಿ ನಿನ್ನಂಗೆ ಭತ್ತದ ಪೈರು ಯಾರು ಹೊರ್ಡ್ಸವರ್ಲ?" ಎಂದು ಸಿದ್ಧನನ್ನು ಹೊಗಳುತ್ತಾ ಅವನನ್ನು ಪೂರಿಯಂತೆ ಉಬ್ಬಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದ ಮಂಜ.
ನನಗೆ ಅಚ್ಚರಿ ಮೂಡಿಸಿದ ಸಂಗತಿಯೆಂದರೆ, ಹದಿನಾರು-ಹದಿನೇಳು ವರ್ಷಗಳಿಂದ ನಾನು ಗಮನಿಸದ ಒಂದು ಸಂಗತಿಯನ್ನು ಮಂಜ ನನ್ನ ಗಮನಕ್ಕೆ ಅವನಿಗರಿವಿಲ್ಲದೆಯೇ ತಂದಿದ್ದ.
ಅದು ನನ್ನೂರಿನ ರಚನೆ. ಯಾವ ವಾಸ್ತುಶಾತ್ರಜ್ಞ ರೂಪಿಸಿದ್ದನೋ, ಜಾತಿ ಪ್ರಕಾರವಾಗಿ ಜೋಡಿಸಿಟ್ಟಂತೆ ಇತ್ತು. ಊರು ಶುರುವಾಗುತ್ತಿದ್ದಂತೆ ಬಲಬದಿಗೆ ಹರಿಜನರ ಕಾಲೋನಿ, ಎಡಬದಿಗೆ ಲಿಂಗಾಯಿತರ "ಪಟೇಲರ ಬೀದಿ". ಹಾಗೆ ಮುಂದಕ್ಕೆ ಸಾಗಿದರೆ ಎಡಬದಿಗೆ ಬ್ರಾಹ್ಮಣರ ಅಗ್ರಹಾರ ಊರಿನವರ ಬಾಯಲ್ಲಿ "ಬ್ರಾಂಬ್ರಟ್ಟಿ" ಎಂದೇ ಪ್ರಸಿದ್ಧ. ಬಲಬದಿಗೆ ಗೌಡರು ವಾಸಿಸುವ ಗೌಡರ ಹಟ್ಟಿ (ಗೌಡ್ರಟ್ಟಿ),ಹಾಗೆ ಮುಂದಕ್ಕೆ ಬೆಸ್ತರು, ಗೊಲ್ಲರು ವಾಸಿಸುವ ಬೆಸ್ತರ ಹಟ್ಟಿ(ಬೆಸ್ತ್ರಟ್ಟಿ), ಗೊಲ್ಲರಹಟ್ಟಿ(ಗೊಲ್ಲ್ರಟ್ಟಿ), ಕೊನೆಗೆ ಊರಾಚೆಗಿನ "ಜನತಾ ಮನೆ" (ಜನತಾ ಪಾರ್ಟಿಯವರು ನಿರಾಶ್ರಿತರಿಗೆಂದು ಸರ್ಕಾರದ ಯೋಜನೆಯಡಿ ನಿರ್ಮಿಸಿದ ಮನೆಗಳು). ನಾನು ಈಗ ನನ್ನೂರನ್ನು ಬೇರೆಯೇ ದೃಷ್ಟಿಯಿಂದ ನೋಡತೊಡಗಿದೆ, ನನ್ನೂರು ಈಗ ವಿಸ್ಮಯದಂತೆ ಕಂಡಿತು.
ಕಿವಿಗೆ ಅಪ್ಪಳಿಸಿದ ನಗೆ ಚಟಾಕಿಯಿಂದಾಗಿ ನಾನು ಮತ್ತೆ ಕಟ್ಟೆ ಪ್ರಪಂಚಕ್ಕೆ ಮರುಳಿದೆ, ನನ್ನ ಯೋಚನಾಲಹರಿಯಲ್ಲಿ ಮುಳುಗಿದ್ದ ಕಾರಣ ಕೆಲವು ಘನಂದಾರಿ ವಿಷಯಗಳು ನನ್ನ ಅರಿವಿಗೆ ಬಾರದೆ ಚರ್ಚೆಯಾಗಿದ್ದವು.
ಸಿದ್ಧ, ಮಂಜ ಯಾವಗಲೋ ಎದ್ದು ಹೋಗಿದ್ದರು, ಕೃತಕ ಮಳೆ ಬರಿಸುವ ಸೀಮೆ ಅಕ್ಕಿ ರೂಪದ ಗುಳುಗೆಗಳು ಇತಿಹಾಸದ ಪುಟ ಸೇರಿದ್ದವು.

"....ಅಲ್ಲೆಲ್ಲ ಜೂಜಿಗೆ ಯಾಪಾಟಿ ದುಡ್ಡು ಸುರೀತಾರೆ ಗೊತ್ತೇಣ್ರುಲ್ಲಾ? ಲ್ಯಾಸ್ ವೇಗಾಸಿನಲ್ಲಿ ಯಂಡ ಸಪ್ಲೈ ಮಾಡೋರು ಯಂಗುಸ್ರೇಯಾ, ಗಂಡು ಹೈಕ್ಳು ಬಡ್ಡೇತವು ಬರೀ ಕುಡೀತವೆ ಅಷ್ಟೇಯಾ..." ಎಂದು ಅಮೇರಿಕಾದ "ಪಾಪದ ನಗರಿ" ಎಂದೇ ಖ್ಯಾತಿ ಗಳಿಸಿರುವ ಲಾಸ್ವೇಗಾಸ್ ಬಗ್ಗೆ ಒಂದು ಉಪದೇಶ ನೀಡುತ್ತಿದ್ದರು ಕಟ್ಟೇ ಬಳಗದಲ್ಲಿ ಹಿರೀ ತಲೆ ಎನಿಸಿ ಕೊಂಡಿದ್ದ ಶೇಷಪ್ಪನವರು, ಉರುಫ್ ಬ್ರಾಂಬ್ರಟ್ಟಿ ಶೇಷಪ್ಪನವರು.
(ಒಂದೇ ಹೆಸರಿನ ೩-೪ ಜನರು ಇರುವ ಸಾಧ್ಯತೆಗಳಿರುವುದರಿಂದ ಎಲ್ಲರ ಹೆಸರಿನ ಮುಂದೆ ಅವರ ಜಾತಿಯ ಹಟ್ಟಿಯ ಹೆಸರು ಸೇರಿಸಿ ಅವರನ್ನು ಗುರುತಿಸುವುದು ನನ್ನೂರಿನ ಹಲವು ವಿಸ್ಮಯಗಳಲ್ಲಿ ಒಂದು, ಇದರ ಬಗ್ಗೆ ಸಹ  ನನ್ನ ಅರಿವು ಮೂಡಿದ್ದು ಕಟ್ಟೆಯ ಹಾಳು ಹರಟೆಯಲ್ಲೇ)
ಟೆಲಿಕಾಂ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುತಿದ್ದ ಕಾಲದಲ್ಲಿ ತರಬೇತಿಗೆಂದು ಮುಂಬಯಿ, ಮದರಾಸು ಮೊದಲಾದ ಊರುಗಳಿಗೆ ಹೋಗಿ ಬಂದಿದ್ದರು ಶೇಷಪ್ಪನವರು, ಅದೇ ಅವರ ಪಾಲಿಗೆ ಲಾಸ್ವೇಗಾಸ್, ಬ್ಯಾಂಗ್ಕಾಕ್ ಎಲ್ಲವೂ ಆಗಿದ್ದವು. ಕಟ್ಟೇ ಬಳಗದಲ್ಲಿ ತುಸು ಹೆಚ್ಚೇ ಎನ್ನುವಂತೆ ಓದಿದವರೂ-ತಿಳಿದವರೂ ಆಗಿದ್ದ ಅವರು "ಆ ವಯ್ಯನಿಗೆ ಗೊತ್ತಿಲ್ದೇಯಿರೋ ವಿಷಯವೇ ಇಲ್ಲ ಕಣ್ರುಲ್ಲಾ" ಎನ್ನುವ ಹೆಗ್ಗಳಿಕೆಗೆ ಕಾರಣರಾಗಿದ್ದರು ಮತ್ತು ಕಟ್ಟೆ ಬಳಗದಲ್ಲಿ "ಗಣ್ಯವ್ಯಕ್ತಿ" ಎಂಬ ಸ್ಥಾನವನ್ನು ಗಳಿಸಿಕೊಂಡಿದ್ದರು.

ಶೇಷಪ್ಪನವರ ಮಾತು ಅಂತ್ಯವಿಲ್ಲದ ಹನುಮನ ಬಾಲದಂತೆ ಬೆಳೆಯುತ್ತಿತ್ತೋ ಏನೋ, ಅಷ್ಟರಲ್ಲಿ ದೂರದಿಂದಲೇ ನನ್ನ ತಾತನವರು ನನ್ನನ್ನು ಹುಡುಕುತ್ತಾ ಬಂದವರು ದೂರದಲ್ಲೇ ನಿಂತು "ಲೋ ಶೇಷ, ನಮ್ ಹುಡ್ಗ ಏನಾದ್ರೂ ಈ ಕಡೆ ಬಂದಿದ್ನೇನೋ?" ಎಂದು ಕೂಗಿ ಕೇಳಿದರು.
ನನಗೆ ಬಾಯಿಬಿಡಲು ಕೂಡ ಅವಕಾಶ ಕೊಡದೆ "ಈಗ್ ಹಿಂಗ್ ಇತ್ಲಾಕಡೆ ಓದ್ನಪ್ಪ, ಮನೀ ಕಡೀಕ್ ಹ್ವಂಟಿರ್ಬೇಕು" ಎಂದು ಅವರನ್ನು ಸಾಗಿಹಾಕಿದರು, ಬಳಿಕ ನನಗೆ "ನೀ ಎಷ್ಟಾದರೂ ಓದೋ ಹುಡ್ಗ, ನಮ್ ಜ್ಯೊತೆ ಸೇರುದ್ರೆ ನಿಮ್ಮಜ್ಜ ನಿಂಗೆ ಬೈದಾರು, ನಮ್ಮಿಂದ ನಿಂಗೆ ಕೆಟ್ಟ ಹಸರು ಬರೋದು ಬ್ಯಾಡ, ನೀ ಮನೆ ಕಡೆ ಹೊರ್ಡು" ಎಂದು ನನ್ನ ಅಂದಿನ ಕಟ್ಟೇ ಪುರಾಣಕ್ಕೆ ಅಂತ್ಯದ ನಾಂದಿ ಹಾಡಿದ್ದರು ಶೇಷಪ್ಪನವರು.

ಎದ್ದು ಮನೆ ಕಡೆ ಹೊರಟವನಿಗೆ
ಚಂದ್ರೇಗೌಡರ "ಬಯಲು ಸೀಮೆ ಕಟ್ಟೆ ಪುರಾಣ" ನೆನಪಾಗತೊಡಗಿತು. ಅಲ್ಲಿಯ ಕಾಲ್ಪನಿಕ ಪಾತ್ರಧಾರಿಗಳಾದ ಉಗ್ರಿ, ಜುಮ್ಮಿ, ವಾಟ್ಟಿಸ್ಸೆಯರು ನನಗೆ ವಾಸ್ತವದಲ್ಲಿ ಕಂಡಿದ್ದರು. ಅಂದಿನ ಕಟ್ಟೆ ಹರಟೆಯಲ್ಲಿ ನಾನು ಬೇರೆಯದೇ ಒಂದು ಲೋಕದಲ್ಲಿ ವಿಹರಿಸಿ ಬಂದಿದ್ದೆ.
ನಿಜಕ್ಕೂ ನಾ ಕಂಡಿದ್ದು ಕಾಲ್ಪನಿಕತೆಯಲ್ಲಿ ವಾಸ್ತವವೋ ಅಥವಾ ವಾಸ್ತವದಲ್ಲಿ ಕಾಲ್ಪನಿಕವೋ ತಿಳಿಯದಾದೆ, ಉತ್ತರಕ್ಕಾಗಿ ಶೋಧಿಸುತ್ತಾ ಶೋಧಿಸುತ್ತಾ ಈ ಅಂಕಣವನ್ನು ಬರೆದುಬಿಟ್ಟೆ, ನೀವೂ ಕೂಡ ಬೇಜಾರಿಲ್ಲದೆ ಓದಿದಿರಿ, ಅದಕ್ಕಾಗಿ ನಾನೆಂದೂ ನಿಮಗೆ ಚಿರಋಣಿ.

Thursday 9 February 2012

ಮೊಬೈಲೋಪನಿಷತ್

ಬಹಳ ದಿನಗಳ ನಂತರ ಭೂಮಿ ಮೇಲೆ ಕಾಲೂರಿದ ನನಗೆ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆ ಫೋನಾಯಿಸುವ ಅಭ್ಯಾಸ, ಅಭ್ಯಾಸ ಅನ್ನುವುದಕ್ಕಿಂತ ನಾನು ನೀರಿನಿಂದ ಭೂಮಿಗೆ ಬಂದಿರುವ ಬಗ್ಗೆ ಸಾರಿ ಹೇಳುವ ಒಂದು ಪರಿ ಅಂತ ಅನ್ನಬಹುದು. ಈಚಿನ ದಿನಗಳಲ್ಲಿ ಮಾತು ಕತೆಗಳೆಲ್ಲವೊ Facebook, Twitter ನಲ್ಲಿ ನಡೆಯುತ್ತಿದ್ದರೂ ನನಗೆ ಸಮಾಧಾನ ಕೊಡುವುದು ಫೋನಿನ ಸಂಭಾಷಣೆ ಮಾತ್ರ. ಇದರಿಂದ ಕೆಲವರಿಗೆ ಕಸಿವಿಸಿ ಯಾಗುವುದು ನಿಜ,ಸಾಮಾನ್ಯವಾಗಿ ಫೋನು ಮಾಡಿದಾಗ ಹೆಚ್ಚುವರಿ ಜನ Busy ಇರುವುದುಂಟು, "ಯಾವಾಗ್ ಬಂದ್ಯೊ?? ಸ್ವಲ್ಪ Busy ಇದೀನಿ ಆಮೇಲೆ Phone ಮಾಡ್ತೀನಿ" ಅಂತ ಹೇಳಿ ಮಾಡಿ ಮತ್ತೆ ಸಮಯ ಸಿಕ್ಕಾಗ ಫೋನು ಮಾಡಿ ಮಾತಾಡುವವರದ್ದು ಒಂದು ವರ್ಗವಾದರೆ, ಫೋನನ್ನು ಎತ್ತದೆ ಇರುವವರದ್ದು ಇನ್ನೊಂದು ವರ್ಗ.ನನ್ನ ಗಮನ ಸೆಳೆಯುವವರೆಂದರೆ ಈ ಎರಡನೆ ವರ್ಗದವರು, ಮತ್ತು ಫೋನು ಎತ್ತದೆ ಇರುವುದಕ್ಕೆ ಅವರುಗಳು ನೀಡುವ ಸಮಜಾಯಿಸಿ. ಇದರ ಅವಶ್ಯಕಥೆ ಇಲ್ಲದಿದ್ದರೂ ಕತೆ ಮೇಲೆ ಕತೆ ಕಟ್ಟಿ ಕೊನೆಗೆ ತಾವು ಫೋಣಿಸಿದ ಸುಳ್ಳಿನ ಕಂತೆಯೊಳಗೆ ತಾವೇ ಸಿಲುಕಿ ಒದ್ದಾಡುವ ಸ್ಥಿತಿ ಕಂಡು ನನ್ನನು ನಗುವಂತೆ ಮಾಡುವ ಮಹಾನುಭಾವರಿಗೆ ನನ್ನ ಈ ಬ್ಲಾಗ್ ಅರ್ಪಣೆ.
ಎಲ್ಲಕ್ಕಿಂತ ಮಿಗಿಲಾಗಿ ಅವರು ಕೊಡುವ ಕಾರಣಗಳಲ್ಲಿ ಅವರ ಕ್ರಿಯಾಶೀಲತೆ ನನಗೆ ಅಚ್ಚರಿಯುಂಟು ಮಾಡುತ್ತದೆ. ಇಲ್ಲಿ ಕೆಲವು ಉದಾಹರಣೆ ಅಷ್ಟೆ ನಿಮ್ಮ ಮುಂದಿಡುತ್ತೇನೆ. ಓದಿ.
"ಮಗಾ ನಿನ್ ಪೋನು ಬಂದಾಗ ನಾನು Meeting ನಲ್ಲಿ ಇದ್ದೆ, ಆಮೇಲೆ ಮತ್ತೆ ಮಾಡಿದಾಗ Drive ಮಾಡ್ತಾಯಿದ್ದೆ" ಆದರೆ ನಾನು ಫೋನು ಮಾಡಿದ್ದು ಒಂದೇ ಸಲ.
"ನಿನ್ ಪೋನು ಬಂದಾಗ ನಾನು ನಮ್ಮ Manager ಜೊತೆ Project Discuss ಮಾಡ್ತಾಯಿದ್ದೆ" ನಾನು ಪೋನು ಮಾಡಿದ್ದು ಭಾನುವಾರ, ಹೀಗೆ "ಕೆಲಸ ಇದೆ" ಅನ್ನೋರು ಇವ್ರೆ, "ತಲೆ ಮೇಲೆ ತಲೆ ಬಿದ್ರು Weekends ನಲ್ಲಿ Office ಕೆಲಸ ಮಾಡಲ್ಲ" ಅಂತ ಹೇಳೋರು ಇವ್ರೆ, ಯಾವುದನ್ನ ನಂಬೋದು??
"ನಿನ್ ಪೋನು ಬಂದಾಗ ನಾನು Shopping ಮಾಡ್ತಾಯಿದ್ದೆ, ಎರಡೂ ಕೈಯಲ್ಲಿ ಬ್ಯಾಗು ಗಳಿದ್ದವು, ಅದಕ್ಕೆ Receive ಮಾಡೋಕೆ ಆಗ್ಲಿಲ್ಲ"
"ಫೋನನ್ನ ಕಾರಿನಲ್ಲೇ ಬಿಟ್ಟು Picture ನೋಡೋಕೆ ಹೋಗಿದ್ದೆ" ಎರಡೂ ಮೂಗಿನ ಮೇಲೆ ಬೆರಳು ಇಡುವಂತ ಉತ್ತರಗಳು.
ಇನ್ನೊಂದು ಪಂಗಡ ಇದೆ, ತಮ್ಮ ಬಗ್ಗೆ ಹೇಳಿ ಕೊಳ್ಳುವವರು, ಆದರೆ ನೇರವಾಗಿ ಅವರು ಹೇಳಿ ಕೊಳ್ಳುವುದಿಲ್ಲ, ಬದಲಾಗಿ ನಮ್ಮ ಬಾಯಿಂದಲೆ ಶಹಭಾಶ್ ಗಿರಿ ಗಿಟ್ಟಿಸಿ ಕೊಳ್ಳುವುದರಲ್ಲಿ ನಿಸ್ಸೀಮರು.
"Hello!!!, Yes, who's this??!!" ಅಂತ ಹೇಳಿ ನಮ್ಮ ಮುಖಭಂಗವಾಗಿದಕ್ಕೆ ಸಂತೋಷ ಪಡುತ್ತಾ, "ಅಯ್ಯೋ ನೀನೇನೊ??, ನಾನು ಹೊಸ Phone ತಗೋಂಡೆ, ಹಳೇ Contacts ಎಲ್ಲ Delete ಆಯ್ತು, ಅದಿಕ್ಕೆ ಗೊತ್ತಾಗ್ಲಿಲ್ಲ"
ಹೊಸ ಪೋನು ಬಂದರೆ ಎಲ್ಲರೂ ಮಾಡುವ ಕೆಲಸವೆಂದರೆ ಹಳೆಯ ನಂಬರುಗಳನ್ನು SIM ಗೆ Transfer ಮಾಡುವುದು ಅಲ್ಲವಾ?ಅದೇ ಪುಣ್ಯಾತ್ಮನಿಗೆ 2-3 ತಿಂಗಳ ನಂತರ ಪೋನು ಮಾಡಿದಾಗ ಸಿಗುವ ಪ್ರತಿಕ್ರಿಯೆ..,
"ಇದ್ಯಾವ ನಂಬರೋ ಮಾರಾಯಾ? ಪದೇ ಪದೇ ನಂಬರು ಬದಲಾಯಿಸಿದರೆ ನಮಗೂ ಗುರ್ತು ಹಿಡಿಯೋದು ಕಷ್ಟ ಆಗುತ್ತೆ" ಕಳೆದ 8 ವರ್ಷಗಳಿಂದಲೂ ನನ್ನ ನಂಬರು ಬದಲಾಗಿಲ್ಲವೆಂಬುದು ಗೊತ್ತಿದ್ದೂ ಆಡುವ ಮಾತಿದು.
"ಒ ನೀನಾ?? Sorry, US ಇಂದ ನಮ್ಮ Manager ಪೋನು ಬರೋದಿತ್ತು, ಅವರದೇ ಪೋನು ಅನ್ಕೊಂಡೆ" ನನ್ನ ನಂಬರು ನೋಡುದ್ರೆ ಗೊತ್ತಾಗಲ್ವ ಇದು Local Call ಅಂತ. " Handsfree ಹಾಕ್ಕೊಂಡಿದ್ನಲ್ಲ, ಗೊತ್ತಾಗಲಿಲ್ಲ" ಎನ್ನುವ ReadyMade ಉತ್ತರ ಅವರ ಬಳಿ ಇರುತ್ತದೆ. ಬೆಪ್ಪಾಗುವ ಸರದಿ ಮಾತ್ರ ನನ್ನದು.ಇದು ಅತ್ಯಂತ ಕ್ರಿಯಾಶೀಲತೆ ಇರುವವರು ಕೊಡುವ ಉತ್ತರಗಳು, ಅಷ್ಟೇನು ಕ್ರಿಯಾಶೀಲತೆಯಿಲ್ಲದವರ ಉತ್ತರ ಅಷ್ಟೇ ಸಪ್ಪೆಯಾಗಿರುತ್ತದೆ.
"ಫೋನು charge ಗೆ ಹಾಕಿದ್ದೆ, ರಿಂಗ್ ಆಗಿದ್ದು ಗೊತ್ತಾಗ್ಲಿಲ್ಲ"

"ಫೋನು silent mode ನಲ್ಲಿ ಇತ್ತು ಅದಕ್ಕೆ ಗೊತ್ತಾಗ್ಲಿಲ್ಲ" ಇವರು ಕೊಡುವ ಕಾರಣಗಳು ಸಾಮಾನ್ಯವಾಗಿ ಬದಲಾಗುವುದಿಲ್ಲ. 

ಇನ್ನೊಂದು ಪಂಗಡ ಇದೆ, ಇವರ ಬಳಿ ಯಾವುದೇ ಸಮಜಾಯಿಸಿ ಇರುವುದಿಲ್ಲ, ಬದಲಾಗಿ ನೇರವಾಗಿ ನಮ್ಮ ಮೇಲೆ ಆರೋಪ ಹೊರಸುವವರು. "ಫೋನು ಮಾಡಿದ್ಯ? ನನಗಾ??!! ಯಾವಾಗ?? ಸಾದ್ಯನೇ ಇಲ್ಲ, ನಿನ್ನ ನಂಬರಿನಿಂದ ಯಾವುದೇ ಫೋನು ಬಂದಿಲ್ಲ, ನೀ ಬೇರೆ ಯಾರಿಗೋ ಮಾಡಿದ್ಯ.." ಕೊನೆಗೆ ನಾವೇ ಸೋತು ಅವರ ವಾದಕ್ಕೆ ಒಪ್ಪಿಗೆ ನೀಡಿದ ನಂತರವೇ ಮಾತು ಮುಂದುವರಿಯುವುದು.

ಇಲ್ಲಿ ನಾನು ನೀವು ಕೂಡ ಇದಕ್ಕೆ ಹೊರತಲ್ಲ, ದಿನದಲ್ಲಿ ಒಮ್ಮೆಯಾದರೂ ಇಂತಹ ಒಂದು ಸನ್ನಿವೇಶ ಎದುರಿಸಿರುತ್ತೇವೆ, ಮೇಲೆ ಹೇಳಿದ ಕಾರಣಾವಳಿಗಳನ್ನು ಕೇಳಿರುತ್ತೇವೆ, ಇವೆಲ್ಲಕ್ಕಿಂತ ಮಿಗಿಲಾಗಿ ಮೇಲೆ ವರ್ಣಿಸಿರುವ ಯಾವುದಾದರೊಂದು ಪಂಗಡಕ್ಕೆ ನಾವೂ ಸೇರಿದ್ದೇವೆ, ಮತ್ತು ನಮಗೆ ಬೇಡದವರು, ಬೇಕಾದವರು, ಪೋನು ಮಾಡಿದಾಗ ಮೇಲೆ ಹೇಳಿರುವ ಕಾರಣಗಳಲ್ಲಿ ಒಂದನ್ನು ಖಂಡಿತವಾಗಿಯು ಬಳಸಿದ್ದೇವೆ.

ನೀವು ಯಾವ ಗುಂಪಿಗೆ ಸೇರಿದವರು ಅಂತ ತೀರ್ಮಾನಿಸಿ, ನನ್ನ ಮೊಬೈಲ್ಗೆ ಯಾವುದೋ Missed Call ಬಂದಿದೆ, Call Miss ಆಗಿದಕ್ಕೆ ಅವರಿಗೆ ಒಂದು ಕಾರಣ ಕೊಟ್ಟ ನಂತರ ನಾನು ಯಾವ ಗುಂಪಿಗೆ ಸೇರಿದವನು ಅಂತ ಹೇಳುತ್ತೇನೆ.

Friday 25 March 2011

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ...

"ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ.........." FM ನಲ್ಲಿ ತೇಲಿ ಬಂದ ಈ ಹಾಡು ನನ್ನ ಮನಸ್ಸಿನ ಯೋಚನಾಲಹರಿಯನ್ನು ಸ್ವಲ್ಪ ಗರಿಗೆದರಿದಂತೆ ಮಾಡಿತು. ಇಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ಆ ಹಕ್ಕಿಯನ್ನು ನೆನೆದು ಬರೆದ ಈ ಅಪರೂಪದ ಹಾಗು ಎಕೈಕ ಹಾಡು ಆ ಹಕ್ಕಿಗೆ ಅರ್ಪಿಸಿದಂತಿತ್ತು.
ಗುಬ್ಬಚ್ಚಿಯೇ ಇಲ್ಲದ ಇಂದಿನ ದಿನಗಳಲ್ಲಿ ಗುಬ್ಬಚ್ಚಿಯ ಗೂಡಿನಲ್ಲಿ ಕದ್ದುಮುಚ್ಚಿ ಪ್ರೇಮಿಗಳ ಕೈಲಿ ಕುಚ್ಚಿಕುಚ್ಚಿ ಆಡಿಸುವ ಆ ಸಾಹಿತ್ಯಕಾರನ ಕಲ್ಪನೆಗೆ ನಿಜಕ್ಕು ತಲೆಬಾಗಬೇಕು.

ನಾನು ಮಗುವಾಗಿದ್ದಾಗ ಊಟ ಮಾಡಲು ಹಠ ಮಾಡಿದರೆ ಕಾಗೆ-ಗುಬ್ಬಿ ತೋರಿಸಿ ಊಟ ಮಾಡಿಸುತ್ತಿದ್ದರಂತೆ. ಕಾಗೆ-ಗುಬ್ಬಿ ತೋರಿಸಿದರೆ ಕ್ಷಣ ಮಾತ್ರದಲ್ಲಿ ಮಗುವಿನ ಹಟ ಬಂದ್, ಮಹಡಿಯ ಮೇಲೆ ಬಿಸಿಲಿಗೆ ಹಾಕಿದ ಅರಳು ಸಂಡಿಗೆ, ಗೋದಿ, ಅಕ್ಕಿ ಮುಂತಾದವುಗಳನ್ನು ಕದ್ದು-ಮುಚ್ಚಿ ಹೆಕ್ಕಿ ತಿನ್ನುತ್ತಿದ್ದ ಅವುಗಳ ಸಮೂಹವು ಒಮ್ಮೆ "ಉಶ್ಷ್.." ಎಂದು ಕೈ ಬೀಸಿದಾಗ ಪುರ್ರ್ರನೆ ಹಾರಿಹೋಗುವ ಅವುಗಳ ಪರಿ ನಿಜಕ್ಕೊ ಮನಸ್ಸಿಗೆ ಮುದ ನೀಡುತ್ತಿದ್ದವು. ಹೀಗೆ ಬಾಲ್ಯದಲ್ಲಿ ನಮ್ಮನ್ನು ಕಾಡಿದ, ಮನರಂಜಿಸಿದ ಗುಬ್ಬಕ್ಕ ಇಂದು ನಶಿಸಿ ಹೋಗುತ್ತಿರುವ ಪ್ರಾಣಿ-ಪಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ವಿಪರ್ಯಾಸ. ಇಂದು ಬೆಂಗಳೊರಿನ ಆಸುಪಾಸಿನಲೆಲ್ಲೂ ಗುಬ್ಬಿಯ ಸುಳಿವು ಇಲ್ಲ. ಜಾಗತೀಕರಣ, ಅತಿಯಾದ ನಾಗರೀಕರಣದಿಂದಾಗಿ ಹಸಿರಿನ ಬುಡಕ್ಕೆ ಕೂಡ್ಲಿ ಇಟ್ಟಿರುವುದೇ ಇದಕ್ಕೆ ಕಾರಣ ಎಂಬುದು ವಾಸ್ತವಿಕ ಸಂಗತಿಯಾದರೆ, ಮೊಬೈಲ್ ಫೋನುಗಳ tower ಗಳಿಂದ ಉಂಟಾಗುವ ತರಂಗಗಳ ಕಂಪನವು ಗುಬ್ಬಿಯ ಜನನ ಶಕ್ತಿಯನ್ನು ಕಡಿಮೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಇನ್ನೊಂದು ಸಮೂಹದ ವಾದವಾಗಿದೆ. ಇತ್ತೀಚೆಗಷ್ಟೇ ಊಟಿಯ ಪ್ರಕೃತಿಯ ರಮ್ಯತಾಣದಲ್ಲಿ ಮೊಬೈಲ್ ಫೋನ್ Tower ಗಳ ನಡುವೆಯು ಗುಬ್ಬಿಗಳ ಚಿಲಿ-ಪಿಲಿಯನ್ನು ಕೇಳ ಆನಂದಿಸಿದ ನನಗೆ ಈ Tower ಬಗೆಗಿನ ವಾದವನ್ನು ಸಂಪೂರ್ಣವಾಗಿ ನಂಬುವುದು ಸ್ವಲ್ಪ ಕಷ್ಟವೇ.


ಕಾರಣ ಎನೇ ಇರಲಿ, ಗುಬ್ಬಿಗಳ ಚಿಲಿ-ಪಿಲಿಗಳ ಕಲರವ ಇಂದು ನೆನಪು ಮಾತ್ರ. ಮತ್ತು ಆ ನೆನಪು ಕೆಲವೊಮ್ಮೆ ಬಹಳ ಕಾಡಿಸುವುದುಂಟು, ಬಹುಶಃ ಬೆಂಗಳೂರಿಗರು ಗುಬ್ಬಿಯನ್ನು ನೋಡಲೇಬೇಕೆಂದು ಹಟಕ್ಕೆ ಬಿದ್ದರೆ ಅವುಗಳು ಕಾಣಸಿಗುವ ಹತ್ತಿರದ ತಾಣಗಳು ಎಂದರೆ ಬನ್ನೇರುಘಟ್ಟ, ವಿಮಾನ ನಿಲ್ದಾಣ, ನಂದಿ ಬೆಟ್ಟ ಮಾತ್ರ ಎನಿಸುತ್ತದೆ.

ರೇಡಿಯೊದಲ್ಲಿ ಬರುತ್ತಿದ್ದ ಹಾಡು ಯಾವಾಗಲೋ ಮುಗಿದಿತ್ತು, ಆದರೆ ನನ್ನನು ನನ್ನ ಯೋಚನಾಲಹರಿಯಿಂದ ಬಡಿದು ಎಬ್ಬಿಸಿದ್ದು ಗುಬ್ಬಿಯ ಚಿಲಿ-ಪಿಲಿ ಸದ್ದು. ಕೆಲವೇ ಕ್ಷಣಗಳ ಹಿಂದೆ ಅಗೋಚರ ಎಂದು ನಂಬಿದ್ದು ಈಗ ಕ್ಷಣಾರ್ಧದಲ್ಲಿ ಗೋಚರವಾಗಿದ್ದಕ್ಕೆ ಸಂಭ್ರಮಿಸುತ್ತಾ ಸದ್ದು ಬಂದ ಕಡೆ ಧಾವಿಸಿದೆ, ಅದು ನನ್ನ ಹೆಂಡತಿಯ ಮೊಬೈಲ್ ನ ರಿಂಗ್ ಟೋನ್ ಆಗಿತ್ತು. ಛೇ!!!

Friday 15 January 2010

ನೂರೊಂದು ನೆನಪು

ಬಹಳ ದಿನಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಡುತ್ತಿದ್ದ ಸೋಲಿನ ಬಾಧೆಯ ಬಗ್ಗೆ ಬರೆದಿದ್ದೆ. ವರ್ಷ ಅಂತ್ಯ ಗೊಂಡಂತೆ ಆ ಸೋಲಿನ ಬಾಧೆಯು ನಶಿಸಿ ಹೋಗುತ್ತದೆ ಎಂಬ ನನ್ನ ಎಣಿಕೆ ಸುಳ್ಳಾದದ್ದು ಡಿಸಂಬರ್ 30 ರಂದು.
ಕನ್ನಡ ಚಿತ್ರರಂಗಕ್ಕೆ ಒಂದು ಶಕ್ತಿಯಂತೆ ಇದ್ದ ಮೇರು ನಟ ಡಾವಿಷ್ಣುವರ್ಧನ್ ಅವರು ವರ್ಷಾಂತ್ಯ ಗೊಳ್ಳುವ ಮೊದಲೇ ತಮ್ಮ ಜೀವನದ ಅಂತ್ಯವನ್ನು ಕಂಡರು.
ವಿಷ್ಣು ಅವರ ಸಾವು ತೀರಾ ಅನಿರೀಕ್ಷಿತ, ಅದಕ್ಕೆ ಇರಬೇಕು ಅದನ್ನು ನಂಬಲು ಇನ್ನೂ ಅಸಾಧ್ಯ.

ಕ್ಷಮಿಸಿ,ನೊಂದು ಮರೆತುಹೋದ ವಿಷಯವನ್ನು ಮತ್ತೆ ಪ್ರಸ್ತಾಪಿಸಿ ನಿಮಗೆ ಬೇಜಾರು ಮಾಡ್ತಾಯಿದೀನಿ.
ನಾನು ಕೂಡ ಇದೇ ಕಾರಣದಿಂದ ಈ ವಿಷ್ಯದ ಪ್ರಸ್ತಾಪ ಮಾಡಿರಲಿಲ್ಲ, ಆದರೆ ಪದೇ ಪದೆ ವಿಷ್ಣು ಅವರ ಚಿತ್ರದ ತುಣುಕುಗಳನ್ನು ತೋರಿಸಿ ಮತ್ತೆ ಮತ್ತೆ ಅವರ ನೆನಪು ಕಾಡುವಂತೆ ಮಾಡುವ ಯಶಸ್ಸು ಮಾಧ್ಯಮಗಳಿಗೆ ಸಲ್ಲುತ್ತವೆ. ಅಂಥ ಮೇರು ನಟನ ನೆನಪಿಗೆ ಈ ಬ್ಲಾಗ್ ಅರ್ಪಣೆ.
ನಾಗರಹಾವು,ಸುಪ್ರಭಾತ, ರಾಯರು ಬಂದರು ಮಾವನ ಮನೆಗೆ, ಬಂಧನ, ಮುತ್ತಿನಹಾರ ಹೀಗೆ ಸಾಲಾಗಿ ತಮ್ಮ ಅಭಿನಯ ಕೌಶಲ್ಯವನ್ನು ತೋರಿಸಿದ ವಿಷ್ಣು ಅವರ ಚಿತ್ರಗಳ ಹೆಸರನ್ನು ಪಟ್ಟಿ ಮಾಡುತ್ತ ಹೋದರೆ ಈ ಬ್ಲಾಗ್ ಬಹಳ ದೊಡ್ಡದಾಗುತ್ತದೆ.
ಡಿ 30ರಂದು ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ವಿಷ್ಣುವರ್ಧನ್!! ಹೆಸರಾಂತ Internet search Engine ಆದ Google ನಲ್ಲಿ ಅಂದು ಹುಡುಕಲ್ಪಟ್ಟ ಅಂಶಗಳಲ್ಲಿ ಶೇ 65 ರಷ್ಟು ವಿಷ್ಣು ಅವರಿಗೆ ಸಂಭಂದ ಪಟ್ಟ ವಿಷಯಗಳು ಮತ್ತು ಇದೊಂದು ದಾಖಲೆ ಎಂದು ಸ್ವತಃ Google ಸಂಸ್ಥೆಯೆ ಹೇಳಿಕೆ ಕೊಟ್ಟಿತು. ಇಂಥ ಖ್ಯಾತಿಯುಳ್ಳ ಮಹಾನ್ ನಟನನ್ನು ಪಡೆದಕ್ಕಾಗಿ ಹೆಮ್ಮೆ ಪಡಬೇಕೊ ಅಥವ ಕಳೆದುಕೊಂಡಿದ್ದಕ್ಕೆ ದುಃಖಿಸಬೇಕೊ ತಿಳಿಯದು.
ಇಷ್ಟಲ್ಲ ಖ್ಯಾತಿಗಳಿಸಿದ್ದರೂ ವಿಷ್ಣುಗೆ ಇತ್ತೀಚಿನ ದಿನಗಳಲ್ಲಿ ಏನೋ ಅಸಮಾಧಾನ ಬಾಧಿಸುತಿತ್ತು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಅಭಿಪ್ರಾಯ ಪಡುತ್ತಾರೆ.
ವಿಷ್ಣುಗೆ ಆಸಕ್ತಿ ಕಡಿಮೆ ಆಗಿತ್ತೋ ಅಥವ ಅಭಿಮಾನಿಗಳ ಒತ್ತಾಯವೋ ಒಳ್ಳೆಯ ಅಭಿರುಚಿಯಿರುವ ಚಿತ್ರಗಲಲ್ಲಿ ವಿಷ್ಣು ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಅವರ
ಪ್ರತಿಭೆಯನ್ನು ನಮ್ಮ ಚಿತ್ರರಂಗವು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನುವುದು ನನ್ನ ವಾದ.
ಆ ಕಾರಣದಿಂದಲೆ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲೂ "ಬಳ್ಳಾರಿ ನಾಗ"ದಂತ ಚಿತ್ರದಲ್ಲಿ ನಟಿಸುವಂತ ದೌರ್ಭಾಗ್ಯವನ್ನು ಕಾಣಬೇಕಾಯ್ತು.
ಇಂತ ಮಹಾನ್ ನಟನ ಕೈ ಹಿಡಿದ ಭಾರತಿ ಅವರ ಪರಿಸ್ಥಿತಿಯನ್ನು ಅಂದು ನೋಡಿ ನಿಜಕ್ಕೂ ಬಹಳ ಹಿಂಸೆಯಾಯ್ತು. ಗಂಡನ ಕಳೆದುಕೊಂಡ ನೋವಿನ ಭಾರದ ಜೊತೆ ರೊಚ್ಚಗೆದ್ದ ಅಭಿಮಾನಿ ರೂಪದ ಕಿಡಿಗೇಡಿಗಳ ಸಮೂಹವನ್ನುದ್ದೇಶಿಸಿ "ದಯವಿಟ್ಟು ಯಾರು ಗಲಾಟೆ ಮಾಡಬೇಡಿ" ಎಂದು ಕೈ ಮುಗಿದು ಶಾಂತಿಗೊಳಿಸುವ ಜವಾಬ್ದಾರಿಯನ್ನೂ ಹೊರಬೇಕಾಯ್ತು. ಇಷ್ಟೆಲ್ಲರ ನಡುವೆಯೂ ’ಜೈ’ ಕಾರ ಹಾಕುವಂತ ಅವಿವೇಕದ ಕೆಲಸವನ್ನು ಮಾಡಿದ ತಿಳಿಗೇಡಿಗಳನ್ನು ಅಭಿಮಾನಿಗಳೆಂದು ಪರಿಗಣಿಸಲು ಸ್ವಲ್ಪ ಕಷ್ಟವೇ.
ವಿಷ್ಣು ಅವರ ಸಾವು ನಾಡಿಗೆ ಭರಿಸಲಾಗದ ನಷ್ಟ, ಆದರೆ ಅದಕ್ಕಿಂತಲೂ ಹೆಚ್ಚಿನ ನಷ್ಟವನ್ನು ರೊಚ್ಚಗೆದ್ದ ಅಭಿಮಾನಿ ಸಮೂಹವು ಮಾಡಿತೆನ್ನುವುದು ನಾಚಿಕೆಗೇಡಿನ ವಿಷಯ.
ಇಷ್ಟೆಲ್ಲವನ್ನು ನೇರ ಪ್ರಸಾರದಲ್ಲಿ ತೋರಿಸುತ್ತಿದ್ದ ವಾಹಿನಿಗಳು ಜೊತೆಯಲಿ ವಿಷ್ಣು ಅವರ "ದಿಗ್ಗಜರು" ಚಿತ್ರದ ತುಣುಕನ್ನು ತೋರಿಸಿತು, ವಿಷ್ಣು ಅವರನ್ನು ಯಮದೂತರು ಕರೆದೊಯ್ಯುತ್ತಿರುತ್ತಾರೆ ಆಗ ವಿಷ್ಣು "ಬರುವಾಗ ನಾನು ಏನು ಹೊತ್ಗೊಂಡು ಬರಲಿಲ್ಲ, ಆದರೆ ಹೋಗುವಾಗ ನಿಮ್ಮ ಪ್ರೀತಿ, ಅಭಿಮಾನ ಹೊತ್ಗೊಂಡು ಹೋಗ್ತಾಯಿದೀನಿ...........ನಾ ಮತ್ತೆ ಹುಟ್ಟಿ ಬರ್ತೀನಿ" ಎಂಬ ಮಾತನ್ನು ಹೇಳುವ ಸನ್ನಿವೇಶವನ್ನು ಮತ್ತೆ ಮತ್ತೆ ತೋರಿಸಿದಾಗ..ನಿಜಕ್ಕೂ ವಿಷ್ಣು ಈ ಮಾತನ್ನು ಅಂದು ವಾಸ್ತವದಲ್ಲೂ ಆಡಿದಂತೆ ಭಾಸವಾಗುತ್ತಿತ್ತು.

ಆ ಮಾತು ನಿಜವಾಗುತ್ತ?
ಆಗಲಿ ಅಂತ ನಾನು ಆಶಿಸುತ್ತೇನೆ. ನೀವು??