Tuesday 30 September 2014

ಬಯಲುಸೀಮೆ ಕಟ್ಟೆ ಪುರಾಣ

ಹೀಗೊಂದು ಅಂಕಣ ಪ್ರಸಿದ್ದ ವಾರಪತ್ರಿಕೆಯಾದ "ಲಂಕೇಶ್ ಪತ್ರಿಕೆ"ಯಲ್ಲಿ ಪ್ರಕಟವಾಗುತ್ತಿತು. ಬಿ.ಚಂದ್ರೇಗೌಡ್ರು ಕೊಡುತ್ತಿದ್ದ ಗ್ರಾಮೀಣ ಚಿತ್ರಣವೂ ಮನಸ್ಸಿಗೆ ಬಹಳ ಮುದನೀಡುತ್ತಿತ್ತು. ನನ್ನೂರಿಗೆ ಹೋಗುವಾಗ ದಾರಿಯಲ್ಲಿ ಹೊತ್ತು ಕಳೆಯಲು ಅದಕ್ಕಿಂತ ಸೂಕ್ತವಾದ ಮನೋರಂಜನಾ ಮಾರ್ಗ ಬೇರೆಯೊಂದಿದ್ದಂತೆ ನನಗೆ ಅನಿಸಿಲ್ಲ.
ಹಳ್ಳಿಯ ಜೀವನ ಶೈಲಿ, ಅಲ್ಲಿಯ ಜನರ ಮುಗ್ಧತೆ, ಅವರ ನೋವು/ನಲಿವು, ಅವರ ಹಾಳುಹರಟೆ, ತಮ್ಮಲ್ಲಿ ಅಪಾರವಾದ ಜ್ಞಾನಭಂಡಾರವಿದೆ ಎನ್ನುವ ಅವರ ದೃಢವಾದ ನಂಬಿಕೆ  ಇವೆಲ್ಲವನ್ನೂ ಒಂದು ವಿನೋದ-ವಿಡಂಬನೆ ಮಿಶ್ರಿತ ನಗೆಹನಿಯಾಗಿ ಬರೆಯುತ್ತಿದ್ದ ಚಂದ್ರೇಗೌಡರ ಶೈಲಿಯೂ ಒಂದು ಗ್ರಾಮೀಣ ಲೋಕವನ್ನೇ ಕಣ್ಣ ಮುಂದೆ ತೆರೆದಿಡುತ್ತಿತ್ತು.
ಆ ಅಂಕಣದಲ್ಲಿ ಬರುತ್ತಿದ್ದ ಖಾಯಂ ಕಾಲ್ಪನಿಕ ಪಾತ್ರಧಾರಿಗಳಾದ ಉಗ್ರಿ, ಜುಮ್ಮಿ, ವಾಟಿಸ್ಸೆಯರು ನನ್ನ ಸಹ ಪ್ರಯಾಣಿಕರಾಗಿ ಪ್ರಯಾಣವನ್ನು ಒಂದು ಅನುಭವವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರಭಾವ ಎಷ್ಟರ ಮಟ್ಟಿಗೆ ಇತ್ತೆಂದರೆ ನನ್ನೂರಿನ ಜನರಲ್ಲಿ ಆ ಪಾತ್ರಗಳು ಹುದುಗಿರಬಹುದೇನೋ ಎಂದು ಸಂಶೋಧಿಸುತ್ತಿದ್ದೆ.
ನನ್ನೂರು ಮಲೆಸೀಮೆಗೆ ಸೇರಿದ್ದರೂ ಸಹ ಬಯಲುಸೀಮೆ ಹೆಚ್ಚೇನು ದೂರವಿರಲಿಲ್ಲವಾದ್ದರಿಂದ ಆ ಅಂಕಣವೂ ನನ್ನೂರಿನಿಂದಲೇ ಪ್ರೇರಿತವಾದುದ್ದೇನೋ ಎಂದು ಎಷ್ಟೋ ಸಲ ಅನಿಸಿದ್ದುಂಟು.
ನನಗೆ ವಯಸ್ಸು ೧೭ ತುಂಬುವವರೆಗೂ ನನ್ನೂರಿನಲ್ಲಿ ನನ್ನ ವಾಸ್ತವ್ಯ ಕೇವಲ ಬೇಸಿಗೆ ರಜೆಗಷ್ಟೇ ಸೀಮಿತವಾಗಿತ್ತು. ಹಾಸನದಲ್ಲಿ ಇಂಜೀನಿಯರಿಂಗ್ ಸೇರಿದಾಗ ಅಲ್ಲಿಂದ ಕೇವಲ ೮ ಕಿ.ಮೀ ದೂರದಲ್ಲಿದ್ದ ನನ್ನ ಊರಿನಲ್ಲೇ ಅಜ್ಜನ ಮನೆಯಲ್ಲಿ ಇದ್ದು ಓದುವ ಅವಕಾಶ ದೊರೆಯಿತು.
ಕಾಲೇಜು ಮುಗಿಸಿ ಮನೆಗೆ ಬಂದ ಮೇಲೆ ಸಂಜೆ ಹೊತ್ತು ಕಳೆಯಲು ದಾರಿಯನ್ನು ಹುಡುಕುತ್ತಿದವನಿಗೆ ಕಂಡಿದ್ದು ಅಜ್ಜನ ಮನೆಯ ಎದುರು ಇದ್ದ ಅರಳೀ ಮರದ ಕಟ್ಟೆ.
ಅಲ್ಲಿ ಕೂತಿದ್ದ ನಾಕಾರು ಜನರು. ಚಿಕ್ಕಂದಿನಿಂದ ಊರಿಗೆ ಬಂದು ಹೋಗಿ ಮಾಡುತ್ತಿದ್ದರಿಂದ ಎಲ್ಲರೂ ಪರಿಚಿತರೆ. ಅವರೊಂದಿಗೆ ಮಾತಿಗೆ ಕೂತೆ, ಇನ್ನೂ ಇಂಜಿನಿಯರಿಂಗ್ ಸೇರಿದ ಹೊಸತು, ಸಹಜವಾಗಿಯೆ ಅವರುಗಳಿಗೆ ಅದರ ಬಗ್ಗೆ ಕುತೂಹಲ, ಎಲ್ಲಕ್ಕಿಂತ ಮಿಗಿಲಾಗಿ "ಚಿಕ್ಕಂದಿನಿಂದ ಬೆಂಗಳೂರಿನಲ್ಲೆ ವಿಧ್ಯಾಭ್ಯಾಸ ಮಾಡಿದವನು ಈಗ ಇಂಜಿನಿಯರಿಂಗ್ ಮಾಡಲು ಹಾಸನಕ್ಕೆ ಯಾಕೆ ಬಂದ?" ಎನ್ನುವ ಅವರ ಅನುಮಾನ ಬಗೆಹರಿಸಿಕೊಳ್ಳುವ ಹವಣಿಕೆಯೇ ಹೆಚ್ಚಾಗಿತ್ತು. ಸಾಧ್ಯವಾದಷ್ಟು ಅವರಿಗೆ ಅಂದಿನ ದಿನಗಳಲ್ಲಿ ಇದ್ದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮೈಸೂರು ವಿಶ್ವವಿದ್ಯಾಲಯವೂ ಬಹಳ ಸುಪ್ರಸಿದ್ಧವೆಂದೂ ಹಾಗೂ ಹಾಸನದ ಪ್ರಾಂತ್ಯವೂ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿರುವುದಾಗಿಯೂ ವಿವರಿಸಲು ಹತ್ತಿದೆ. ಹಾಗೆ ಹಾದು ಹೋಗುತ್ತಿದ್ದ "ಗೊಲ್ಲ್ರಟ್ಟಿ ಸಿದ್ಧ" ನಾವೇನೋ ಘನಂಧಾರಿ ವಿಷಯ ಮಾತನಾಡುತ್ತಿದ್ದೇವೆ ಎಂದು ತಿಳಿದು ಹೆಗಲಮೇಲಿನಿಂದ ಟವಲನ್ನು ಕೊಡುವುತ್ತಾ ಬಂದು ಕೂತವನೇ ಕುತೂಹಲದಿಂದ ಕೇಳತೊಡಗಿದ. ಸಿದ್ಧ ಇದ್ದದನ್ನು ನೋಡಿ "ಗೌಡ್ರಟ್ಟಿ ಮಂಜ"ನೂ ಬಂದು ಕುಳಿತ, ಹೀಗೆ ಇವರನ್ನು ನೋಡಿ ಅವರು ಅವರನ್ನು ನೋಡಿ ಇವರು ಬಂದು ಕೂರುತ್ತಾ ಅಲ್ಲಿ ಒಂದು ಜನ ಸಮೂಹವೇ ಸೇರಿತು. ಇಷ್ಟರಲ್ಲಿ ನನ್ನ ಮಾತು ಯಾವಾಗಲೋ ಮುಗಿದಿತ್ತು.
ನನ್ನ ಮಾತು ಮುಗಿಯಲೇ ಕಾಯುತ್ತಿದ್ದವನಂತೆ ಮಂಜನೂ "ಏನ್ಲ ಸಿದ್ಧ? ಯಂಗವೋ ಪೈರು?" ಎಂದು ಸಿದ್ಧನ ಭತ್ತದ ಪೈರಿನ ಬಗ್ಗೆ ವಿಚಾರಿಸುವ ಸಲುವಾಗಿ ಅವನನ್ನು ಮಾತಿಗೆ ಎಳೆದಿದ್ದ.
"ಥೋsssss.....ಏನ್ ಪೈರೋ ಮಾರಾಯ, ಮಳಿಲ್ದಲೆಯಾ ವಣಕ್ಕೋಂಡ್ ಸಾಯ್ತಿವೆ, ಕೆರೆ ಬತ್ಥೋಗ್ ವರ್ಷಾತು, ಬೋರ್ನಾಗೆ ನೀರ್ ಬರೊಲ್ದು" ಎನ್ನುತ್ತಾ ತನ್ನ ಗೋಳಿನ ಖಾತೆಯನ್ನೇ ತೆರೆದ.
"ಅಮೇರಿಕ್ದಲ್ಲಿ ಮಳೆ ಬರ್ಸ್ಸೋ ಮೆಷೀನು ಸಿಗ್ತವಂತೆ, ಗ್ರಾಮೀಣ ಬ್ಯಾಂಕ್ನಾಗೆ ಸಾಲ ತಕ್ಕೋಂಡ್ ಒಂದು ಮೆಷೀನು ತರಸ್ಕ ಅತ್ಲಾಗಿ" ಎಂದು ಅವನ ಸಮಸ್ಯೆಗೆ ನೇರವಾಗಿ ವಿದೇಶದ ಪರಿಹಾರ ಸೂಚಿಸಿದ ಮಂಜ.
"ವ್ಹಾssss... ಅದೇನ್ ಸೌದೆ ಹೊತ್ಗಂಡ್ ಬಂದಹಂಗೆ ಅನ್ಕ್ಯಂಡ್ಯ?" ಎಂದ ಸಿದ್ದ ಮತ್ತೆ ರಾಗವೆಳೆದ.
ಅಷ್ಟರಲ್ಲಿ ತನ್ನ ಗ್ಯಾರೇಜು ಕೆಲಸ ಮುಗಿಸಿ ಗ್ರೀಸಿನಿಂದ ಮಸಿಯಾಗಿದ್ದ ಕೈಯನ್ನು ಉಜ್ಜಿಕೊಳ್ಳುತ್ತಾ "ಏಣ್ರುಲ್ಲಾ ಅದೂ, ಸೀದಾ ಅಮೇರಿಕಾಯಿಂದವ ಸೌದೆ ತರೋ ಮಾತು?" ಎನ್ನುತಾ ಮಾತಿನ ಧಿಕ್ಕನ್ನೇ ಬದಲಿಸಿ ಬಿಟ್ಟ ಬೆಸ್ತ್ರಟ್ಟಿ ರಾಜ.
"ಥೋsssss ನಿನ್ಮನೆಕಾಯ್ಹಿಹೋಗ ಸೌದೆ ಅಲ್ಲ ಕಣ್ಲ, ಮಳೆ ಬರ್ಸೋ ಮೆಷಿನ್ನು" ಎಂದು ಅವನಿಗೆ ಅರ್ಥ ಮಾಡಿಸಿದ ಬ್ರಾಂಬ್ರಟ್ಟಿ ಸೀನ.
"ವ್ಹಾ.., ಆ ಮೆಷಿನ್ನು ಕೆಟ್ವೋದ್ರೆ ಅದಕ್ಕೆಲ್ಲವ ಪಾರ್ಟ್ಸು ಗೀರ್ಟ್ಸು ಅಮೇರಿಕಾಯಿಂದನೆ ತರಿಸ್ಬೇಬೇಕಾಯ್ತದೆ, ಬ್ಯಾಡ ಕಣ್ಲ ಸಿದ್ದ, ನನ್ ಮಾತ್ಕೇಳು, ಮದ್ರಾಸಿನಲ್ಲಿ ಅದಕ್ಕೇಂತಲೆಯಾ ಕೆಮಿಕಲ್ಲು ಸಿಗ್ತವೆ, ಒಂದು ಲೋಡು ತರಸ್ಕಂಡು ನೋಡು" ಎಂದು ತನ್ನ ಮೆಕ್ಯಾನಿಕ್ ಮೆದುಳನ್ನು ಅವರ ಮುಂದಿಟ್ಟ.
ಅವನ ಮಾತನ್ನು ತಕ್ಕ ಮಟ್ಟಿಗೆ ಒಪ್ಪಿದನಾದರೂ ಕೆಮಿಕಲ್ಲು ಎಂದರೆ ಆಸಿಡ್ ಎಂದೇ ಭಾವಿಸಿದ್ದ ಮಂಜ ತುಸು ಗಾಬರಿಯಾಗೇ ಹೇಳಿದ "ಆದ್ರೂನುವಾ ಆ ಪಾಟಿ ಲೋಡುಗಟ್ಟ್ಲೆ ಆಸಿಡ್ ತರ‍್ಸ್ಕಳೋದು ಅಂದ್ರೆ ಸ್ವಲ್ಪ ಯಡ್ವಟ್ಟೇಯಾ"
"ಉಗೀರ್ಲ ಮಖ್ಖೆ, ಥೊ.... ನಿನ್ನ್ ಮನೆ ಹಡ್ಗತೋಗ ಕೆಮಿಕಲ್ಲು ಅಂದ್ರೆ ಆಸಿಡ್ ಅಂತ ತಿಳ್ಕಂಡ್ಬಿದ್ತು ಪೆದ್ದ್ಬಡ್ಡೆತದು, ಲೇ ಕೆಮಿಕಲ್ಲು ಅಂದ್ರೆ ಆಸಿಡ್ ಅಲ್ಲ ಕಣ್ಲ, ನೋಡಾಕೆ ಸೀಮೆ ಅಕ್ಕಿ ಗುಳ್ಗೆ ಇದ್ದಂಗೆ ಇರ್ತವೆ, ಮಂಕ್ರೀಲಿ ತುಂಬ್ಕ್ಯಂಡ್ ಎರ್ಚ್ಕೊಂಡ್ ಎರ್ಚ್ಕೊಂಡ್ ಒಯ್ತಾಯಿರೋದು ಅಷ್ಟೇಯಾ, ಅದು ನೀರಾಗಿ ಕೆಳಗೆ ಬೀಳ್ತವೆ, ಅಲ್ವೇನ್ರಿ ಅಯ್ನೋರೆ?" ಎಂದು ನಾನೇನೋ ಕೃಷಿ ವಿಜ್ಞಾನದಲ್ಲಿ ಮಹಾ ಪರಿಣಿತನೆಂಬಂತೆ ನನ್ನ ಸಮಜಾಯಿಸಿ ಕೇಳಿದ ರಾಜ.
"ಆಂ" ಎಂಬ ಉದ್ಗಾರವನ್ನಷ್ಟೇ ಹೊರಳಿಸಿದೆ, ಸಂಜೆ ಕತ್ತಲಾದುದರಿಂದ ನನ್ನ ಮುಖ ಭಾವನೆ ಗೋಚರವಾಗದೆ ನನ್ನ ಉದ್ಗಾರವನ್ನಷ್ಟೇ ಕೇಳಿಸಿಕೊಂಡು ಅದನ್ನೇ ನನ್ನ ಸಮಜಾಯಿಸಿ ಎಂದು ತಿಳಿದು "ಅಕಳಪ್ಪ, ಐನೋರು ಹೂ ಅಂದ್ರು, ಇನ್ನೇನ್ಲ ನಿಂದು?" ನನ್ನ ಒಪ್ಪಿಗೆಯೇ ಅಂತಿಮ ಎನ್ನುವಂತೆ ಹೇಳಿದ ರಾಜ.
"ಬ್ಯಾರೆ ಯಾರಾದ್ರು ಜ್ಯೊತೆಗಿದ್ದಿದ್ರೆ ಜಂಟಿ ಖಾತೇಲಿ ತರ್ಸ್ಕ ಬಹುದಿತ್ತು ಅತ್ಲಾಗಿ" ತನ್ನ ಚೆಡ್ಡಿಯನ್ನು ಕೆರೆಯುತ್ತಾ ಕಿವಿಯ ಸಂಧಿಯಿಂದ ಬೀಡಿಯನ್ನು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿದ ಸಿದ್ಧ.
"ಒಂದ್ ಕಡೆಯಿಂದ ನೋಡ್ಕ್ಯೊಂಡ್ ಬಾರ್ಲ ಸಿದ್ದ, ಹರಿಜನ ಕಾಲೋನಿಲಾಗ್ಲಿ, ಬ್ರಾಂಬ್ರಟ್ಟೀಲಾಗ್ಲಿ, ಗೌಡ್ರಟ್ಟಿ, ಗೊಲ್ಲ್ರಟ್ಟಿ, ಬೆಸ್ತ್ರಟ್ಟಿ ಕಡೀಕ್ ಜನತಾ ಮನೆಲಾಗ್ಲಿ ನಿನ್ನಂಗೆ ಭತ್ತದ ಪೈರು ಯಾರು ಹೊರ್ಡ್ಸವರ್ಲ?" ಎಂದು ಸಿದ್ಧನನ್ನು ಹೊಗಳುತ್ತಾ ಅವನನ್ನು ಪೂರಿಯಂತೆ ಉಬ್ಬಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದ ಮಂಜ.
ನನಗೆ ಅಚ್ಚರಿ ಮೂಡಿಸಿದ ಸಂಗತಿಯೆಂದರೆ, ಹದಿನಾರು-ಹದಿನೇಳು ವರ್ಷಗಳಿಂದ ನಾನು ಗಮನಿಸದ ಒಂದು ಸಂಗತಿಯನ್ನು ಮಂಜ ನನ್ನ ಗಮನಕ್ಕೆ ಅವನಿಗರಿವಿಲ್ಲದೆಯೇ ತಂದಿದ್ದ.
ಅದು ನನ್ನೂರಿನ ರಚನೆ. ಯಾವ ವಾಸ್ತುಶಾತ್ರಜ್ಞ ರೂಪಿಸಿದ್ದನೋ, ಜಾತಿ ಪ್ರಕಾರವಾಗಿ ಜೋಡಿಸಿಟ್ಟಂತೆ ಇತ್ತು. ಊರು ಶುರುವಾಗುತ್ತಿದ್ದಂತೆ ಬಲಬದಿಗೆ ಹರಿಜನರ ಕಾಲೋನಿ, ಎಡಬದಿಗೆ ಲಿಂಗಾಯಿತರ "ಪಟೇಲರ ಬೀದಿ". ಹಾಗೆ ಮುಂದಕ್ಕೆ ಸಾಗಿದರೆ ಎಡಬದಿಗೆ ಬ್ರಾಹ್ಮಣರ ಅಗ್ರಹಾರ ಊರಿನವರ ಬಾಯಲ್ಲಿ "ಬ್ರಾಂಬ್ರಟ್ಟಿ" ಎಂದೇ ಪ್ರಸಿದ್ಧ. ಬಲಬದಿಗೆ ಗೌಡರು ವಾಸಿಸುವ ಗೌಡರ ಹಟ್ಟಿ (ಗೌಡ್ರಟ್ಟಿ),ಹಾಗೆ ಮುಂದಕ್ಕೆ ಬೆಸ್ತರು, ಗೊಲ್ಲರು ವಾಸಿಸುವ ಬೆಸ್ತರ ಹಟ್ಟಿ(ಬೆಸ್ತ್ರಟ್ಟಿ), ಗೊಲ್ಲರಹಟ್ಟಿ(ಗೊಲ್ಲ್ರಟ್ಟಿ), ಕೊನೆಗೆ ಊರಾಚೆಗಿನ "ಜನತಾ ಮನೆ" (ಜನತಾ ಪಾರ್ಟಿಯವರು ನಿರಾಶ್ರಿತರಿಗೆಂದು ಸರ್ಕಾರದ ಯೋಜನೆಯಡಿ ನಿರ್ಮಿಸಿದ ಮನೆಗಳು). ನಾನು ಈಗ ನನ್ನೂರನ್ನು ಬೇರೆಯೇ ದೃಷ್ಟಿಯಿಂದ ನೋಡತೊಡಗಿದೆ, ನನ್ನೂರು ಈಗ ವಿಸ್ಮಯದಂತೆ ಕಂಡಿತು.
ಕಿವಿಗೆ ಅಪ್ಪಳಿಸಿದ ನಗೆ ಚಟಾಕಿಯಿಂದಾಗಿ ನಾನು ಮತ್ತೆ ಕಟ್ಟೆ ಪ್ರಪಂಚಕ್ಕೆ ಮರುಳಿದೆ, ನನ್ನ ಯೋಚನಾಲಹರಿಯಲ್ಲಿ ಮುಳುಗಿದ್ದ ಕಾರಣ ಕೆಲವು ಘನಂದಾರಿ ವಿಷಯಗಳು ನನ್ನ ಅರಿವಿಗೆ ಬಾರದೆ ಚರ್ಚೆಯಾಗಿದ್ದವು.
ಸಿದ್ಧ, ಮಂಜ ಯಾವಗಲೋ ಎದ್ದು ಹೋಗಿದ್ದರು, ಕೃತಕ ಮಳೆ ಬರಿಸುವ ಸೀಮೆ ಅಕ್ಕಿ ರೂಪದ ಗುಳುಗೆಗಳು ಇತಿಹಾಸದ ಪುಟ ಸೇರಿದ್ದವು.

"....ಅಲ್ಲೆಲ್ಲ ಜೂಜಿಗೆ ಯಾಪಾಟಿ ದುಡ್ಡು ಸುರೀತಾರೆ ಗೊತ್ತೇಣ್ರುಲ್ಲಾ? ಲ್ಯಾಸ್ ವೇಗಾಸಿನಲ್ಲಿ ಯಂಡ ಸಪ್ಲೈ ಮಾಡೋರು ಯಂಗುಸ್ರೇಯಾ, ಗಂಡು ಹೈಕ್ಳು ಬಡ್ಡೇತವು ಬರೀ ಕುಡೀತವೆ ಅಷ್ಟೇಯಾ..." ಎಂದು ಅಮೇರಿಕಾದ "ಪಾಪದ ನಗರಿ" ಎಂದೇ ಖ್ಯಾತಿ ಗಳಿಸಿರುವ ಲಾಸ್ವೇಗಾಸ್ ಬಗ್ಗೆ ಒಂದು ಉಪದೇಶ ನೀಡುತ್ತಿದ್ದರು ಕಟ್ಟೇ ಬಳಗದಲ್ಲಿ ಹಿರೀ ತಲೆ ಎನಿಸಿ ಕೊಂಡಿದ್ದ ಶೇಷಪ್ಪನವರು, ಉರುಫ್ ಬ್ರಾಂಬ್ರಟ್ಟಿ ಶೇಷಪ್ಪನವರು.
(ಒಂದೇ ಹೆಸರಿನ ೩-೪ ಜನರು ಇರುವ ಸಾಧ್ಯತೆಗಳಿರುವುದರಿಂದ ಎಲ್ಲರ ಹೆಸರಿನ ಮುಂದೆ ಅವರ ಜಾತಿಯ ಹಟ್ಟಿಯ ಹೆಸರು ಸೇರಿಸಿ ಅವರನ್ನು ಗುರುತಿಸುವುದು ನನ್ನೂರಿನ ಹಲವು ವಿಸ್ಮಯಗಳಲ್ಲಿ ಒಂದು, ಇದರ ಬಗ್ಗೆ ಸಹ  ನನ್ನ ಅರಿವು ಮೂಡಿದ್ದು ಕಟ್ಟೆಯ ಹಾಳು ಹರಟೆಯಲ್ಲೇ)
ಟೆಲಿಕಾಂ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುತಿದ್ದ ಕಾಲದಲ್ಲಿ ತರಬೇತಿಗೆಂದು ಮುಂಬಯಿ, ಮದರಾಸು ಮೊದಲಾದ ಊರುಗಳಿಗೆ ಹೋಗಿ ಬಂದಿದ್ದರು ಶೇಷಪ್ಪನವರು, ಅದೇ ಅವರ ಪಾಲಿಗೆ ಲಾಸ್ವೇಗಾಸ್, ಬ್ಯಾಂಗ್ಕಾಕ್ ಎಲ್ಲವೂ ಆಗಿದ್ದವು. ಕಟ್ಟೇ ಬಳಗದಲ್ಲಿ ತುಸು ಹೆಚ್ಚೇ ಎನ್ನುವಂತೆ ಓದಿದವರೂ-ತಿಳಿದವರೂ ಆಗಿದ್ದ ಅವರು "ಆ ವಯ್ಯನಿಗೆ ಗೊತ್ತಿಲ್ದೇಯಿರೋ ವಿಷಯವೇ ಇಲ್ಲ ಕಣ್ರುಲ್ಲಾ" ಎನ್ನುವ ಹೆಗ್ಗಳಿಕೆಗೆ ಕಾರಣರಾಗಿದ್ದರು ಮತ್ತು ಕಟ್ಟೆ ಬಳಗದಲ್ಲಿ "ಗಣ್ಯವ್ಯಕ್ತಿ" ಎಂಬ ಸ್ಥಾನವನ್ನು ಗಳಿಸಿಕೊಂಡಿದ್ದರು.

ಶೇಷಪ್ಪನವರ ಮಾತು ಅಂತ್ಯವಿಲ್ಲದ ಹನುಮನ ಬಾಲದಂತೆ ಬೆಳೆಯುತ್ತಿತ್ತೋ ಏನೋ, ಅಷ್ಟರಲ್ಲಿ ದೂರದಿಂದಲೇ ನನ್ನ ತಾತನವರು ನನ್ನನ್ನು ಹುಡುಕುತ್ತಾ ಬಂದವರು ದೂರದಲ್ಲೇ ನಿಂತು "ಲೋ ಶೇಷ, ನಮ್ ಹುಡ್ಗ ಏನಾದ್ರೂ ಈ ಕಡೆ ಬಂದಿದ್ನೇನೋ?" ಎಂದು ಕೂಗಿ ಕೇಳಿದರು.
ನನಗೆ ಬಾಯಿಬಿಡಲು ಕೂಡ ಅವಕಾಶ ಕೊಡದೆ "ಈಗ್ ಹಿಂಗ್ ಇತ್ಲಾಕಡೆ ಓದ್ನಪ್ಪ, ಮನೀ ಕಡೀಕ್ ಹ್ವಂಟಿರ್ಬೇಕು" ಎಂದು ಅವರನ್ನು ಸಾಗಿಹಾಕಿದರು, ಬಳಿಕ ನನಗೆ "ನೀ ಎಷ್ಟಾದರೂ ಓದೋ ಹುಡ್ಗ, ನಮ್ ಜ್ಯೊತೆ ಸೇರುದ್ರೆ ನಿಮ್ಮಜ್ಜ ನಿಂಗೆ ಬೈದಾರು, ನಮ್ಮಿಂದ ನಿಂಗೆ ಕೆಟ್ಟ ಹಸರು ಬರೋದು ಬ್ಯಾಡ, ನೀ ಮನೆ ಕಡೆ ಹೊರ್ಡು" ಎಂದು ನನ್ನ ಅಂದಿನ ಕಟ್ಟೇ ಪುರಾಣಕ್ಕೆ ಅಂತ್ಯದ ನಾಂದಿ ಹಾಡಿದ್ದರು ಶೇಷಪ್ಪನವರು.

ಎದ್ದು ಮನೆ ಕಡೆ ಹೊರಟವನಿಗೆ
ಚಂದ್ರೇಗೌಡರ "ಬಯಲು ಸೀಮೆ ಕಟ್ಟೆ ಪುರಾಣ" ನೆನಪಾಗತೊಡಗಿತು. ಅಲ್ಲಿಯ ಕಾಲ್ಪನಿಕ ಪಾತ್ರಧಾರಿಗಳಾದ ಉಗ್ರಿ, ಜುಮ್ಮಿ, ವಾಟ್ಟಿಸ್ಸೆಯರು ನನಗೆ ವಾಸ್ತವದಲ್ಲಿ ಕಂಡಿದ್ದರು. ಅಂದಿನ ಕಟ್ಟೆ ಹರಟೆಯಲ್ಲಿ ನಾನು ಬೇರೆಯದೇ ಒಂದು ಲೋಕದಲ್ಲಿ ವಿಹರಿಸಿ ಬಂದಿದ್ದೆ.
ನಿಜಕ್ಕೂ ನಾ ಕಂಡಿದ್ದು ಕಾಲ್ಪನಿಕತೆಯಲ್ಲಿ ವಾಸ್ತವವೋ ಅಥವಾ ವಾಸ್ತವದಲ್ಲಿ ಕಾಲ್ಪನಿಕವೋ ತಿಳಿಯದಾದೆ, ಉತ್ತರಕ್ಕಾಗಿ ಶೋಧಿಸುತ್ತಾ ಶೋಧಿಸುತ್ತಾ ಈ ಅಂಕಣವನ್ನು ಬರೆದುಬಿಟ್ಟೆ, ನೀವೂ ಕೂಡ ಬೇಜಾರಿಲ್ಲದೆ ಓದಿದಿರಿ, ಅದಕ್ಕಾಗಿ ನಾನೆಂದೂ ನಿಮಗೆ ಚಿರಋಣಿ.