Monday 12 October 2009

ಒಂದು ಹಿಟ್ ಸಿನೆಮಾ ಬೇಕು.......ಸಾರ್....

ಈ ವರ್ಷ ಇನ್ನೇನು ಮುಗೀತಾ ಬಂತು, ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ವರ್ಷ ಶುರು ಆಗಲೇ ಇಲ್ಲ. ಹೊಸ ವರ್ಷದ ಹೊಸ ಕನಸು, ಹೊಸ ಸಿನೆಮಾ, ಹೊಸ ಹಾಡು, ಹೊಸ ಹಿಟ್ .....ಊಹುಂ...ಇದ್ಯಾವುದು ಅವರ ಪಾಲಿಗೆ ದಕ್ಕಲಿಲ್ಲ. ದಕ್ಷಿಣ ಭಾರತದಲ್ಲಿ ಅತ್ಯಂತ ಕಡೆಯ ಸ್ಥಾನದಲ್ಲಿ ಕನ್ನಡ ಚಿತ್ರೋದ್ಯಮ ಬೇರು ಬಿಟ್ಟಿದೆ.
ಒಂದು ಕಾಲದಲ್ಲಿ ತಮ್ಮ ವಿಭಿನ್ನ ಶೈಲಿಗೆ ಹೆಸುರುವಾಸಿಯಾಗಿದ್ದ ಪುಟ್ಟಣ ಕಣಗಾಲ್, ಬಿ. ಆರ್. ಪಂತಲು, ಮುಂತಾದವರು ತಯಾರಿಸುತಿದ್ದ ಚಿತ್ರ‍ಗಳು ಬೇರೆ ಭಾಷೆಗಳಲ್ಲಿ ತಯಾರಾಗುತ್ತಿದ್ದವು. ಅಂತ ಒಂದು ಹೊಸತನವಿರುತ್ತಿತ್ತು ಅವ್ರ ಚಿತ್ರಗಳಲ್ಲಿ.
ಬಹುತೇಕ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳಾಗಿರುತ್ತಿದ್ದವು, ಕಥೆಗೆ ಪ್ರಾಮುಖ್ಯತೆ ಇರುತ್ತಿತ್ತು. ಪಾತ್ರಗಳಲ್ಲಿ ವಿಭಿನ್ನತೆ ಇರುತ್ತಿತ್ತು. ಆದರೆ ಇಂದಿನ ಚಿತ್ರಗಳಲ್ಲಿ ನೈಜತನವಿಲ್ಲ, ಬಹುತೇಕ ಎಲ್ಲವೂ ಅನ್ಯ ಭಾಷೆಗಳಿಂದ ನಕಲು ಮಾಡಿದ ಸಿನೆಮಾಗಳೆ.
ಹಾಗಂತ ನಮ್ಮಲ್ಲಿ ಒಳ್ಳೆ ಕಲೆಗಾರರಿಗೆ ಭರ ಇದೆ ಅಂತ ಅಲ್ಲ, "ಶ್" ಎಂಬ ವಿಶಿಷ್ಟವಾದ ಸಿನೆಮಾ ತೋರಿಸಿದ ಉಪೇಂದ್ರ, "ತರ್ಕ" , "ಉತ್ಕರ್ಷ" ಎಂಬ Suspense thriller ಚಿತ್ರಗಳನ್ನು ಕೊಟ್ಟ ಸುನಿಲ್ ಕುಮಾರ್ ದೇಸಾಯಿ, ಇತ್ತೀಚೆಗೆ ಹೊಸ ಅಲೆ ಎಬ್ಬಿಸಿರುವ "ಮುಂಗಾರು ಮಳೆ" ಯೋಗರಾಜ್ ಭಟ್, "ದುನಿಯಾ" ಸೂರಿ, "ಸೈನೈಡ್" (ಇದು ಈಗ ಹಿಂದಿಯಲ್ಲು ತಯಾರಾಗುತ್ತಿದೆ) ಖ್ಯಾತಿಯ ಎ.ಎಮ್. ಅರ್. ರಮೇಶ್ ಹೀಗೆ ಹೇಳುತ್ತ ಹೋದರೆ ಒಂದು ದೊಡ್ಡ ಪಟ್ಟಿಯೇ ತುಂಬುವುದು.
ಇಷ್ಟೆಲ್ಲಾ ಮೈಲಿಗಲ್ಲು ಸಾಧಿಸಿರುವ ನಮ್ಮ ಕನ್ನಡ ಚಿತ್ರ‍ರಂಗಕ್ಕೆ ಇಂದು ಭಾಧಿನುತ್ತಿರುವುದಾದರೂ ಎನು? ಕಲೆ,ಕಥೆ, ಇವುಗಳ ಕೊರತೆಯೇ? ಹಣದ ಕೊರತೆಯೇ? ಉತ್ತರ ಹೇಳುವುದು ಸ್ವಲ್ಪ ಕಷ್ಟವೆ. ಯಾಕೇಂದ್ರೆ ಇದ್ಯಾವುದಕ್ಕು ಕೊರತೆ ಇಲ್ಲವೇ ಇಲ್ಲ.
ಆದರೂ "ಸೋಲು" ಎಂಬ ಎರಡಕ್ಷರದ ಪದ ನಮ್ಮ ಚಿತ್ರೋದ್ಯಮವನ್ನು ಕಂಗಾಲಾಗುವಂತೆ ಮಾಡಿದೆ. ಸೋಲಿನ ಭೀತಿ ಎಷ್ಟ್ರಮಟ್ಟಿಗೆ ಇದೆ ಅಂದ್ರೆ ಎಲ್ಲರೂ ಗೆಲುವಿನ ಕುದುರೆಯ ಹಿಡಿಯುವ ಸಲುವಾಗಿ "ರಿಮೇಕ್" ಎಂಬ ಕಪ್ಪೆಚಿಪ್ಪಿನ ಗೂಡಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಈ ವರ್ಷ ಇದುವರೆಗೂ ತೆರೆಕಂಡ ಯಾವುದೇ ಚಿತ್ರವು ವಾಣಿಜ್ಯ ದೃಷ್ಟಿಯಿಂದ ಗೆದಿಲ್ಲ ಎನ್ನುವುದು ಬಹಳ ಸೂಕ್ಶ್ಮವಾಗಿ ಗಮನಿಸಬೇಕಾದ ವಿಷಯ. "ಎದ್ದೇಳು ಮಂಜುನಾಥ" ಜನರ ಮೆಚ್ಚುಗೆ ಗಳಿಸಿದ್ದರೂ ವಾಣಿಜ್ಯ ದೃಷ್ಟಿಯಿಂದ ಅದು ಹಿಟ್ ಅನ್ನಿಸಿಕೊಳ್ಳಲಿಲ್ಲ. ಹೇಮಂತ್ ಹೆಗ್ಡೆ ಅವರ "ಹೌಸ್ಫ಼ುಲ್" ಚಿತ್ರ‍ದ ಯಾವುದೇ ಪ್ರದರ್ಶನವು ಹೌಸ್ಫ಼ುಲ್ ಆಗಲಿಲ್ಲ ಅನ್ನುವುದು ವಿಪರ್ಯಾಸ.
ಮೊದಲೇ ತತ್ತರಿಸಿಹೋಗಿರುವ ಚಿತ್ರೋದ್ಯಮಕ್ಕೆ ಇದು ಆರದ ಗಾಯವಾಗಿದೆ.
ಕನ್ನಡ ಚಿತ್ರರಂಗ ಮೊದಲಿಂದಲೂ ತುಂಬ Safe Game ಆಡಿಕೊಂಡೇ ಬಂದಿದೆ, ಹಾಗಾಗಿ ಹೆಚ್ಚುವರಿ ಎಲ್ಲಾ ನಿರ್ಮಾಪಕರೂ "ರೀಮೇಕ್" ಹಾದಿ ಹಿಡಿದಿದ್ದರು, ಅದು ಕೆಲಕಾಲಕ್ಕೆ ಲಾಭದಾಯಕವೂ ಆಗಿತ್ತು, ಇತಿಹಾಸ ಕೆದುಕಿದಾಗ ಸಿಗುವ ಕೆಲವು ಉದಾಹರಣೆಗಳೆಂದರೆ "ರಣಧೀರ" "ರಾಮಾಚಾರಿ" ಹೆಚ್ಚುಕಡಿಮೆ ರವಿಚಂದ್ರನ್ ರ ಎಲ್ಲಾ ಚಿತ್ರಗಳು, "ಆಪ್ತಮಿತ್ರ" ಸೇರಿದಂತೆ ದ್ವಾರಕೀಶ್ ರ ಎಲ್ಲಾ ಚಿತ್ರಗಳು, ಸುಧೀಪ್ ರನ್ನು ಸ್ಟಾರ್ ಆಗಿ ಪರಿವರ್ತನೆ ಮಾಡಿದ "ಹುಚ್ಚ" ಅವರೇ ನಿರ್ದೇಶನ ಮಾಡಿದ "ಮೈ ಆಟೋಗ್ರಾಫ್" ಹೀಗೆ ಎಲ್ಲವೂ ರೀಮೇಕ್ ಚಿತ್ರಗಳೆ.
ಸುಲಭವಾಗಿ ಅನ್ಯ ಭಾಷೆ ಚಿತ್ರ ಒಂದನ್ನು ಕನ್ನಡೀಕರಿಸಿ ಹಾಕಿದ ಬಂಡವಾಳ ದಕ್ಕಬೇಕಾದರೆ ಸ್ವ-ಮೇಕ್ ಮಾಡುವ ಸಾಹಸವೇಕೆ ಎಂಬಂತ ಒಂದು ವಾತಾವರಣ ಸೃಷ್ಟಿಯಾಯಿತು, ಮುಂದೆ ಸಾಲಾಗಿ ಬಂದಿದ್ದು ಕನ್ನಡೀಕರಿಸಿದ ಚಿತ್ರಗಳೇ. ("ರೀ-ಮೇಕ್" ಎಂಬ ಪದದ ಬಳಕೆ ಕೆಲವರಿಗೆ ಆಗಿ ಬರುವುದಿಲ್ಲ).
ಭೂಗತ ಲೋಕದ ಕಥೆ ಆಧಾರಿತವಾದ "ಓಂ" , "ಜೋಗಿ" "ದುನಿಯಾ" ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿದ ಚಿತ್ರಗಳು, ಪರಿಣಾಮ ಮುಂದೆ ಬಂದ (ಈಗಲೂ ಬರುತ್ತಿರುವ) ಎಷ್ಟೋ ಚಿತ್ರಗಳ ಮೂಲ ಕಥಾವಸ್ತು ಇದೇ ಆಯಿತು. "ಮಚ್ಚು" "ಲಾಂಗು" ನಾಯಕನ ಖಡ್ಡಾಯ ಆಯುಧಗಳಾದವು.
"ಕನ್ನಡದವರೇ ಕನ್ನಡ ಸಿನೆಮಾ ನೋಡಲ್ಲ..." ಅನ್ನುವುದು ನಿರ್ಮಾಪಕರ ಅಭಿಪ್ರಾಯ. "ಒಳ್ಳೇ ಸಿನೆಮಾ ಮಾಡುದ್ರೆ ಜನ ನೋಡ್ತಾರೆ" ಅಂತ "ಮುಂಗಾರು ಮಳೆ" "ಗಾಳಿಪಟ" ನಿರ್ದೇಶಕ ಯೋಗರಾಜ್ ಭಟ್ ಹೇಳಿಕೆ ನೀಡಿದ್ದರು, ಆದರೆ ಇತ್ತೀಚೆಗಷ್ತೆ ಬಿಡುಗಡೆಯಾದ ಅವರ "ಮನಸಾರೆ" ಚಿತ್ರವನ್ನೂ ಜನರು ಮನಸಾರೆ ತಿರಸ್ಕರಿಸಿದಾರೆ.
"ಎದ್ದೇಳು ಮಂಜುನಾಥ" ಚಿತ್ರದಲ್ಲಿ ಒಂದು ಮಾತಿದೆ "ಸ್ವಂತ ಬುದ್ಧಿ ಇರೋರು ರೀ-ಮೇಕ್ ಚಿತ್ರ ಮಾಡಬಾರ್ದು, ಸ್ವಂತ ಬುದ್ಧಿ ಇಲ್ದೇ ಇರೋರು ಸ್ವ-ಮೇಕ್ ಚಿತ್ರ ಮಾಡಬಾರ‍್ದು" ಅಂತ.
ಹಾಗಾದ್ರೆ ಚಿತ್ರೋದ್ಯಮದಲ್ಲಿ ಇರೋರು ಯಾರು? ಸ್ವಂತ ಬುದ್ದಿ ಇರೋರ ಅಥವ ಸ್ವಂತ ಬುದ್ಧಿ ಇಲ್ದೇ ಇರೋರ? ಅದರ ಬಗ್ಗೆ ಚರ್ಚೆ ಬೇಡ, ಅದೇನೆ ಇರಲಿ ಈ ವರ್ಷದಲ್ಲಿ ಇನ್ನು ಎರಡು ತಿಂಗಳು ಬಾಕಿ ಇದೆ, ಆಗಿರುವ ನಿರಾಶೆಯನ್ನು ಅಳಿಸುವ ಒಂದಾದರು ಚಿತ್ರ ಮೂಡಿಬರಲಿ ಎಂದಷ್ಟೇ ಹಾರೈಸುವೆ.